ಅಸ್ಸಾಂನ ಗಿನ್ನೆಸ್ ವಿಶ್ವ ದಾಖಲೆಯ ಬಿಹು ಪ್ರದರ್ಶನದ ಹಾಡಿನಲ್ಲಿ ನಾಗಗಳಿಗೆ ಅವಮಾನ: ಆರೋಪ
ಹಲವು ಸಂಘಟನೆಗಳ ಆಕ್ಷೇಪ

ಹೊಸದಿಲ್ಲಿ: ಕಳೆದ ವಾರ ಅಸ್ಸಾಂ ರಾಜಧಾನಿ ಗುವಹಾಟಿಯ ಸರುಸಜೈ ಸ್ಟೇಡಿಯಂನಲ್ಲಿ 11,304 ನರ್ತಕರು ಮತ್ತು ಡೋಲು ಬಾರಿಸುವವರ ಸಮಾಗಮದೊಂದಿಗೆ ನಡೆದ ಬಿಹು ನೃತ್ಯ ಪ್ರದರ್ಶನವು ಗಿನ್ನೆಸ್ ವಿಶ್ವ ದಾಖಲೆ ಪುಟಕ್ಕೆ ಸೇರಿದೆ. ಆದೆ ಈ ಪ್ರದರ್ಶನದಲ್ಲಿನ ಒಂದು ಹಾಡು, ನಾಗ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
ನಾಗಗಳು ʻಒಕೊರʼ ಎಂದು ಬಣ್ಣಿಸುವ ಒಂದು ಜನಾಂಗೀಯ ಹಾಡನ್ನು ಈ ಪ್ರದರ್ಶನದಲ್ಲಿ ಬಳಸಿರುವುದಕ್ಕೆ ಆಲ್ ಅಸ್ಸಾಂ ನಾಗ ವೆಲ್ಫೇರ್ ಸೊಸೈಟಿ, ಆಲ್ ಅಸ್ಸಾಂ ತಂಗ್ಸ ಸ್ಟೂಡೆಂಟ್ಸ್ ಯೂನಿಯನ್ ತಮ್ಮ ಆಕ್ಷೇಪ ವ್ಯಕ್ತಪಡಿಸಿವೆ. ʻಒಕೊರʼ ಎಂದರೆ ಮೂರ್ಖ ಅಥವಾ ಮೂಗ ಎಂದರ್ಥವಾಗಿದೆ.
ಈ ನಿರ್ದಿಷ್ಟ ಹಾಡಿನಲ್ಲಿ ನಾಗಿಣಿ ಪದದ ಬಳಕೆಗೂ ಆಕ್ಷೇಪಿಸಲಾಗಿದೆ. ನಾಗಿಣಿ ಎಂಬುದು ಈ ಹಾಡಿನಲ್ಲಿ ಹಾವು ಆಗಿದ್ದರೂ ಅದು ನಾಗ ಮಹಿಳೆ ಎಂಬರ್ಥದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
"ನೊಗರ್ ಸಂಗೆ ಸಗೆ ಬೊಗೈ ನು ಮೊಯಿ ಅಸಿಲು... ನೊಗೈ ಮು ಅಲ ಕೊಚು ಖಾಯಿ... ಒಕೊರಾ ನೊಗಕೆ ಭಿನಿಹಿ ಬುಲಿ ಮತಿಹು ಮೊಜೊನಿ ಒಯ್ ನಗನಿಕಿಕೆ ಬುಲಿಲು ಬಾಯಿ," ( ನಾನು ನಾಗ ಮನೆಗಳಲ್ಲಿ ಅಲೆದಾಡುತ್ತಿದ್ದೇನೆ... ನಾಗಾಗಳು ಬಟಾಟೆ, ಗೆಡ್ಡೆ ತಿನ್ನುತ್ತಾರೆ... ನಾನು ನಾಗ ಮೈದುನ ಮತ್ತು ನಾಗಿಣಿ ಸಹೋದರಿ ಕರೆಯುತ್ತೇನೆ."
ಈ ಹಾಡನ್ನು ಕಲಾವಿದ ರಂಜಿತ್ ಗೊಗೊಯಿ ಹಾಡಿದ್ದರು.
ಈ ಹಾಡಿನಲ್ಲಿ ಒಕೊರ, ನೊಗಾ, ನಾಗಿಣಿ ಇತ್ಯಾದಿ ಪದಗಳನ್ನು ಬಳಸಿ ನಾಗ ಸಮುದಾಯಗಳನ್ನು ಅವಮಾನಿಸಲಾಗಿದೆ ಎಂದು ಎಎನ್‌ಡಬ್ಲ್ಯುಎಸ್ ಅಧ್ಯಕ್ಷ ಶೊಂಫ ವಂಗ್ಸು ಮತ್ತು ಪ್ರಧಾನ ಕಾರ್ಯದರ್ಶಿ ಮಂಟೊ ಕೊನ್ಯಕ್ ಹೇಳಿದ್ದಾರೆ.
ಅಸ್ಸಾಂನಲ್ಲಿ ವಾಸಿಸುವ 2.5 ಲಕ್ಷ ನಾಗ ಸಮುದಾಯಗಳ ಭಾವನೆಗಳಿಗೆ ಈ ಹಾಡು ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರಲ್ಲದೆ ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಈ ಹಾಡು ಬಳಕೆಗೆ ಅನುಮತಿಸಬಾರದು ಹಾಗೂ ಈ ಹಾಡು ಹಾಡಿದ ರಂಜಿತ್ ಗೊಗೊಯಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಾಗ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವನ್ನು ಈ ಹಾಡು ಹೊಂದಿರಲಿಲ್ಲ ಎಂದು ಅಸ್ಸಾಂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.







