ಮಂಗಳೂರು| ಕಾರು ಚಾಲಕನ ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು: ಮೊಬೈಲ್ ಗಾಗಿ ಥಳಿಸಿ ಕೊಂದ ಗುಂಪು
ನಾಲ್ವರು ಆರೋಪಿಗಳ ಬಂಧನ

ಮಂಗಳೂರು,ಎ.19: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ನಿವಾಸಿ, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಜನಾರ್ದನ ಪೂಜಾರಿ (45) ಅವರ ಕೊಲೆಗೆ ಸಂಬಂಧಿಸಿದ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ತಿರುವನಂತಪುರದ ಪ್ರಶಾಂತ್ (40), ವಿಟ್ಲದ ಶರತ್ ವಿ. (36), ಕುಶಾಲನಗರದ ಜಿಕೆ ರವಿಕುಮಾರ್ ಯಾನೆ ನಂದೀಶ್ (38), ಕೊಣಾಜೆಯ ವಿಜಯ ಕುಟಿನ್ಹಾ (28) ಎಂದು ಗುರುತಿಸಲಾಗಿದೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಕಾರು ಚಾಲಕನಾಗಿದ್ದ ಜನಾರ್ದನ ಪೂಜಾರಿ ಮಂಗಳವಾರ ಸಂಜೆ 5ರ ವೇಳೆಗೆ ನೆಹರು ಮೈದಾನದ ಬಳಿ ನಿದ್ದೆ ಮಾಡುತ್ತಿದ್ದಾಗ ಆರೋಪಿಗಳು ಮೊಬೈಲ್ ಸುಲಿಗೆ ಮಾಡಲು ಯತ್ನಿಸಿದ್ದರು. ಇದಕ್ಕೆ ಜನಾರ್ದನ ಪೂಜಾರಿ ಪ್ರತಿರೋಧ ತೋರಿದಾಗ ಆರೋಪಿಗಳ ಪೈಕಿ ಒಬ್ಬಾತ ಜನಾರ್ದನ ಪೂಜಾರಿಯ ಎದೆಗೆ ಕಾಲಿನಿಂದ ಒದ್ದ ಎನ್ನಲಾಗಿದೆ.ಇದರಿಂದ ಜನಾರ್ದನ ಪೂಜಾರಿ 6 ಅಡಿ ಆಳಕ್ಕೆ ಬಿದ್ದಿದ್ದು, ಅಲ್ಲಿಗೂ ಧುಮುಕಿದ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಮೊಬೈಲ್ ಕಿತ್ತು ಪರಾರಿಯಾಗಿದ್ದರು.
ಈ ಸಂದರ್ಭ ಜನಾರ್ದನ ಪೂಜಾರಿ ಆಘಾತದಿಂದ ಮೃತಪಟ್ಟಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.