ಪುಲ್ವಾಮ ದಾಳಿಯ ಸತ್ಯ ತಿಳಿಯಲು ಬಯಸುತ್ತಿರುವ ಇಬ್ಬರು ಮೃತ ಯೋಧರ ಕುಟುಂಬಗಳು

ಕೊಲ್ಕತ್ತಾ: ಪುಲ್ವಾಮ ಉಗ್ರ ದಾಳಿಯಲ್ಲಿ ಮೃತಪಟ್ಟಿದ ಪಶ್ಚಿಮ ಬಂಗಾಳದ ಇಬ್ಬರು ಸಿಆರ್‌ಪಿಎಫ್ ಯೋಧರ ಕುಟುಂಬಗಳು ಈ ಘಟನೆಯ ಕುರಿತಾದ ʼಸತ್ಯʼ ತಿಳಿಯಲು ಬಯಸಿವೆ. ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಯೋಧರ ಪ್ರಯಾಣಕ್ಕೆ ವಿಮಾನಗಳನ್ನು ಒದಗಿಸಲು ನಿರಾಕರಿಸಿದ ಸರ್ಕಾರದ ಕ್ರಮವನ್ನು ಟೀಕಿಸಿದ್ದರಲ್ಲದೆ ಈ ವಿಚಾರವನ್ನು ಪ್ರಧಾನಿ ಬಳಿ ಪ್ರಸ್ತಾಪಿಸಿದಾಗ ತಮಗೆ ಸುಮ್ಮನಿರಲು ಹೇಳಿದ್ದರೆಂದು ತಿಳಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿದೆ. ಈ ಹಿನ್ನೆಲೆಯಲ್ಲಿ ಯೋಧರ ಕುಟುಂಬಗಳು ಸತ್ಯ ತಿಳಿಯಲು ಬಯಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು telegraphindia.com ವರದಿ ಮಾಡಿದೆ.
ಪಶ್ಚಿಮ ಬಂಗಾಳದ ಟೆಹೆಟ್ಟಾ ಗ್ರಾಮದ ಸುದೀಪ್ ಬಿಸ್ವಾಸ್ ಹಾಗೂ ಹೌರಾ ಇಲ್ಲಿನ ಬೌರಿಯಾ ಗ್ರಾಮದ ಬಬ್ಲು ಸಂಟ್ರ ಈ ದಾಳಿಯಲ್ಲಿ ಮೃತಪಟ್ಟ 40 ಯೋಧರ ಪೈಕಿ ಇಬ್ಬರಾಗಿದ್ದರು.
ಘಟನೆ ನಡೆದ ಸಂದರ್ಭ 28 ವರ್ಷದವರಾಗಿದ್ದ ಸುದೀಪ್ ಸಿಆರ್‌ಪಿಎಫ್‌ನ 98ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಲ್ವತ್ತು ವರ್ಷದ ಬಬ್ಲು ಅವರು 35ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸುದೀಪ್ ಹೆತ್ತವರಾದ ಸನ್ಯಾಸಿ ಬಿಸ್ವಾಸ್ (68) ಮತ್ತು ಮಮತಾ (63) ಯಾವ ಲೋಪಗಳಿಂದಾಗಿ ಈ ಘಟನೆ ನಡೆದು ತಮ್ಮ ಪುತ್ರ ಸಾಯುವಂತಾಯಿತು ಎಂದು ತಿಳಿಯಲು ಬಯಸಿದ್ದರೆ ಸತ್ಯ ಹೊರಬರುವುದೇ ಇಲ್ಲ ಎಂದು ಹೇಳುತ್ತಾರೆ ಸುದೀಪ್ ಸಹೋದರಿ ಝುಂಪಾ.
"ಘಟನೆ ನಡೆದು ನಾಲ್ಕು ವರ್ಷಗಳಾದರೂ ಜವಾನರಿಗೆ ತೆರಳಲು ವಿಮಾನ ಒದಗಿಸಲು ನಿರಾಕರಿಸಿದ್ದ ಬಗ್ಗೆ ಕೇಂದ್ರ ಮೌನವಾಗಿದೆ, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು. ಆದರೆ ಅದರಿಂದ ನಮಗೇನೂ ಪ್ರಯೋಜನವಿಲ್ಲ, ಕಳೆದುಕೊಂಡ ಸಹೋದರನ ನೆನಪಾಗುವುದು ಅಷ್ಟೇ," ಎಂದು ಆಕೆ ಹೇಳಿದರು.
ಕುಟುಂಬಕ್ಕೆ ಕೇಂದ್ರ ಒದಗಿಸಿದ ಪರಿಹಾರವಾದ ರೂ. 35 ಲಕ್ಷ ಮತ್ತಿತರ ಸವಲತ್ತುಗಳು ಸೇರಿ ಅಂದಾಜು ರೂ. 56 ಲಕ್ಷ ದೊರಕಿದೆ. ಬಂಗಾಳ ಸರ್ಕಾರ ಕೂಡ ಹೆಚ್ಚುವರಿ ರೂ. 5 ಲಕ್ಷ ಪರಿಹಾರ ನೀಡಿದೆ.
ಬಬ್ಲು ತಾಯಿ ಬೊನೊಮಾಲ ಸಂತ್ರಾ (71) ತಮ್ಮ ಮಗನ ನೆನಪಾಗುತ್ತಲೇ ಬಿಕ್ಕಿಬಿಕ್ಕಿ ಅಳುತ್ತಾರೆ. ಬಬ್ಲು ಅವರ ಪತ್ನಿ ಮಿತಾ(36) ರಿಗೆ ಅನುಕಂಪದ ಆಧಾರದಲ್ಲಿ ಕೇಂದ್ರ ಸರ್ಕಾರದ ನೌಕರಿ ಪಡೆದಿದ್ದಾರೆ.
"ದೊಡ್ಡ ಭದ್ರತಾ ಲೋಪ ಸಂಭವಿಸಿದೆ ಎಂದು ನಂಬಿದ್ದೇನೆ, ನನಗೆ ಸತ್ಯ ಗೊತ್ತಾಗಬೇಕು. ಆದರೆ ಅದು ಎಂದಾದರೂ ಹೊರಬರುವುದೇ?" ಎಂದು ಅವರು ಪ್ರಶ್ನಿಸುತ್ತಾರೆ.







