ಪ್ರೊ. ಸಾಯಿಬಾಬಾರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಮತ್ತು ಇತರ ಐದು ಮಂದಿಯನ್ನು ಮಾವೋವಾದಿ ನಂಟು ಪ್ರಕರಣದಲ್ಲಿ ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ಬದಿಗೆ ಸರಿಸಿದೆ. ಈ ಪ್ರಕರಣವನ್ನು ಮತ್ತೆ ಹೈಕೋರ್ಟಿಗೆ ವಾಪಸ್ ಕಳುಹಿಸಿದ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಹೊಸ ಪೀಠದ ಮುಂದಿರಿಸಿ ನಾಲ್ಕು ತಿಂಗಳೊಳಗೆ ತೀರ್ಪು ನೀಡುವಂತೆ ಸೂಚಿಸಿದೆ.
ಈ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠ ಆದೇಶ ನೀಡಿದೆ. ಈ ಪ್ರಕರಣದ ವಿಚಾರಣೆ ಎಲ್ಲಾ ಆಯಾಮಗಳಿಂದಲೂ ಮತ್ತೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಯಿಬಾಬಾ ಮತ್ತಿತರರನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಅಕ್ಟೋಬರ್ 14ರಂದು ಆದೇಶ ಹೊರಡಿಸಿದ್ದರೆ ಅದರ ಮರುದಿನವೇ ವಿಶೇಷ ವಿಚಾರಣೆ ನಡೆಸಿ ಸುಪ್ರಿಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ವಿಧಿಸಿತ್ತು.
ಸಾಯಿಬಾಬಾ ಅವರನ್ನು ಫೆಬ್ರವರಿ 2014 ರಲ್ಲಿ ಬಂಧಿಸಲಾಗಿತ್ತು. ತಮ್ಮನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅವರು 2017ರಲ್ಲಿ ನ್ಯಾಯಾಲಯದ ಕದ ತಟ್ಟಿದ್ದರು. ತಮ್ಮ ವಿರುದ್ಧ ಆರೋಪ ಪಟ್ಟಿ ಹೊರಿಸುವಾಗ ಯುಎಪಿಎ ಇದರ ಸೆಕ್ಷನ್ 45(1) ಅನ್ವಯ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳಲಾಗಿಲ್ಲ ಎಂಬ ಸಾಯಿಬಾಬಾ ಅವರ ವಾದವನ್ನು ಬಾಂಬೆ ಹೈಕೋರ್ಟ್ ಒಪ್ಪಿತ್ತು
ಅವರ ಜೊತೆ ಕೃಷಿಕರಾದ ಕರಿಮನ್ ಟಿರ್ಕಿ ಮತ್ತು ಪಂಡು ಪೋರ(ಈಗ ನಿಧನರಾಗಿದ್ದಾರೆ) ವಿದ್ಯಾರ್ಥಿ ಹೇಮ್ ಕೇಶವದತ್ತ ಮಿಶ್ರ ಮತ್ತು ಪತ್ರಕರ್ತ ಪ್ರಶಾಂತ್ ಸಂಗ್ಲಿಕರ್ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು, ಕಾರ್ಮಿಕ ವಿಜಯ್ ಟಿರ್ಕಿಗೆ ಈ ಪ್ರಕರಣದಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.







