ದ.ಕ ಜಿಲ್ಲೆಯಲ್ಲಿ ಜೆಡಿಎಸ್ ನಿಂದ 3 ಅಭ್ಯರ್ಥಿಗಳು ಕಣಕ್ಕೆ

ಮಂಗಳೂರು: ಮಂಗಳೂರು ನಗರ ದಕ್ಷಿಣ, ಮೂಡಬಿದ್ರೆ, ಪುತ್ತೂರು ವಿಧಾನಸಭಾ ಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ 3 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಈ ಬಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿಸಲಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ವಸಂತ ಪೂಜಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸುಮತಿ ಹೆಗ್ಡೆ ನಾಳೆ ಬೆಳಗ್ಗೆ (ಎ.20) 10.30ಕ್ಕೆ ಪಕ್ಷದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು ಮತ್ತು ಮತದಾರರು ನಗರದ ಪಿವಿಎಸ್ ಜಂಕ್ಷನ್‌ನಿಂದ ಮಹಾನಗರ ಪಾಲಿಕೆಯವರೆಗೆ ಪಾದಯಾತ್ರೆ ಮಾಡಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ವಸಂತ ಪೂಜಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಬಲ ಪಕ್ಷ ಗಳು ಅನ್ಯ ಧರ್ಮಗಳ ನಡುವೆ ವಿಷದ ಬೀಜ ಬಿತ್ತಿವೆ, ಇದರಿಂದ ಕರಾವಳಿಯ ಜನರು ಕೊಂಚ ಬದಲಾವಣೆ ಬಯಸುತ್ತಿದ್ದು, ಈ ಬಾರಿ ಖಂಡಿತವಾಗಿ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ವಸಂತ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯ ಆಡಳಿತದ ವರ್ಚಸ್ಸಿನಿಂದ ಈ ಬಾರಿ ಪಕ್ಷ ಗೆಲ್ಲುವ ಸಾಧ್ಯತೆ ಇದೆ. ಅವರು ಮುಖ್ಯ ಮಂತ್ರಿ ಆದಾಗ, ಜಾರಿಗೊಳಿಸಿದ ಯೋಜನೆಗಳು, ಜನಪರ ಯೋಜನೆ ಗಳು, ರೈತರ ಸಾಲಮನ್ನಾ ಕಾರ್ಯಕ್ರಮ ಜನರ ಮನಸ್ಸು ಗೆದ್ದಿದೆ. ಆದರೆ, ಬೇರೆ ಪಕ್ಷ ಇಂತಹ ಯೋಜನೆಯನ್ನು ಮಾಡಿಲ್ಲ. ಈ ಎಲ್ಲಾ ಕಾರ್ಯಗಳನ್ನು ಜನರು ಮನದಟ್ಟು ಮಾಡಿಕೊಂಡು ಮತವನ್ನು ನೀಡುತ್ತಾರೆ. ಅಲ್ಲದೇ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಡುಗೆ ಅನಿಲ ಹಾಗೂ ಇನ್ನಿತರ ಬೆಲೆ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಎಲ್ಲಾ ಮತದಾರರ ಬೇಡಿಕೆಗಳನ್ನು ಸಂಗ್ರಹಿಸಿಕೊಂಡು ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆಯನ್ನು ಸೇರ್ಪಡೆ ಗೊಳಿಸಿದ್ದೇವೆ ಎಂದು ಹೇಳಿದರು.
ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ, ಈಗಾಗಲೇ ಮನೆ ಮನೆಗೆ ತೆರಳಿ ಮತಯಾಚನೆ ಕಾರ್ಯ ನಡೆಸಿದ್ದೇವೆ. ಪಕ್ಷದ ಎಲ್ಲಾ ಮುಖಂಡರು ನನ್ನನ್ನು ಪ್ರೀತಿಯಿಂದ ಈ ಸ್ಥಾನಕ್ಕೆ ನಿಲ್ಲಿಸಿದ್ದಾರೆ. ಒಂದೇ ನಾಣ್ಯದ ಎರಡು ಮುಖಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಪಕ್ಷಗಳ ಮಧ್ಯೆ ಕಣಕ್ಕೆ ಇಳಿದು ಪೈಪೋಟಿ ನಡೆಸುತ್ತೇನೆ ಎಂದರು.
ಈ ಸಂದರ್ಭ ಜೆಡಿಎಸ್ ಮುಖಂಡರಾದ ಇಕ್ಬಾಲ್ ಮುಲ್ಕಿ, ಧನರಾಜ್, ಪುಷ್ಪರಾಜ್, ರಕ್ಷಿತ್ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.