ಬೆಸ್ಕಾಂ ಹೆಸರಿನಲ್ಲಿ ನಕಲಿ ನೇಮಕಾತಿ ಪ್ರಮಾಣ ಪತ್ರ: ಎಫ್‍ಐಆರ್ ದಾಖಲು

ಬೆಂಗಳೂರು, ಎ. 19: ಬೆಸ್ಕಾಂನಲ್ಲಿ ಮಾಪನ ಓದುಗ, ಕಿರಿಯ ಸಹಾಯಕರ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗಲು ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಹೆಸರಿನ ನಕಲಿನೇಮಕಪ್ರಮಾಣ ಪತ್ರಗಳನ್ನುಸೃಷ್ಟಿಸಿರುವ ದುಷ್ಕರ್ಮಿಗಳ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸೂಚನೆಯ ಮೇರೆಗೆ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ) ಸಿ.ಎನ್. ಮಂಜುನಾಥ್ ಅವರು ನಕಲಿ ಪ್ರಮಾಣ ಪತ್ರ ವಿತರಣೆಯ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ನಕಲಿ ನೇಮಕ ಪ್ರಮಾಣ ಪತ್ರ ಹಂಚಿ ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸುತ್ತಿರುವ ಜಾಲವನ್ನು ಪತ್ತೆ ಹಚ್ಚಿ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಅಧಿಕೃತ ಜ್ಞಾಪನಾಪತ್ರ ಅಥವಾ ಸುತ್ತೋಲೆ ಎಂಬ ನಕಲಿ ನೇಮಕ ಆದೇಶಗಳನ್ನು ವಿದ್ಯುತ್ ಸರಬರಾಜು ಕಂಪನಿ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಹೆಸರಿನಲ್ಲಿ ಹಲವು ಉದ್ಯೋಗ ಆಕಾಂಕ್ಷಿ ವ್ಯಕ್ತಿಗಳಿಗೆ ಕಳುಹಿಸಿ ವ್ಯವಸ್ಥಿತವಾಗಿ ವಂಚಿಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇನ್ನೂ, ಬೆಸ್ಕಾಂ ಮತ್ತು ಕೆಪಿಟಿಸಿಎಲ್‍ನಿಂದ ಉದ್ಯೋಗ ಆಕಾಂಕ್ಷಿಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸುತ್ತೋಲೆಗಳನ್ನು ಕಳುಹಿಸುವುದಿಲ್ಲ. ಇದೊಂದು ಉದ್ಯೋಗ ವಂಚನೆಯ ಜಾಲವಾಗಿದ್ದು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಹೆಸರಿನಲ್ಲಿ ನಿರುದ್ಯೋಗಿಗಳನ್ನು ವಂಚಿಸಿ ಹಣ ಪಡೆಯಲಾಗುತ್ತಿದೆ. ಕಂಪೆನಿಗೆ ಕೆಟ್ಟ ಹೆಸರು ತರುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಪ್ರಧಾನ ವ್ಯವಸ್ಥಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.







