ಎ.23ರಂದು ಡಿ.ಕೆ.ಶಿವಕುಮಾರ್ ಬೈಂದೂರಿಗೆ: ಗೋಪಾಲ ಪೂಜಾರಿ
ಬೈಂದೂರು, ಎ.19: ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎ.23ರಂದು ಬೈಂದೂರಿಗೆ ಆಗಮಿಸಲಿದ್ದು ಬೈಂದೂರಿನ ಯಡ್ತರೆ ಜೆಎನ್‌ಆರ್ ಕಲಾ ಮಂದಿರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತ ಪ್ರಭಾವಿ ಮುಖಂಡರು, ಜಿಪಂ ಸದಸ್ಯರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಎ.25ರಿಂದ ಮನೆ ಮನೆಗೆ ಮತದಾರರ ಭೇಟಿ ಕಾರ್ಯಕ್ರಮ ನಡೆಯಲಿದೆ ಎಂದರು.
ಬಿಜೆಪಿ ಕಳೆದ ಐದು ವರ್ಷಗಳಿಂದ ಮೀನುಗಾರರಿಗೆ ಕೇವಲ ಆಶ್ವಾಸನೆ ಹೊರತುಪಡಿಸಿದರೆ ಬೇರೆನೂ ಕೊಟ್ಟಿಲ್ಲ. ಗಂಗೊಳ್ಳಿ ಮೀನುಗಾರಿಕಾ ಜಟ್ಟಿ ಕುಸಿದು ವರ್ಷ ಕಳೆದರು ರಿಪೇರಿಯಾಗಿಲ್ಲ. 2ನೇ ಹಂತದ ಕಾಮಗಾರಿ ಆರಂಭ ವಾಗಿಲ್ಲ. ಮರವಂತೆ ಬಂದರು ಕಾಮಗಾರಿ ಪೂರ್ಣಗೊಂಡಿಲ್ಲ. ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸರಬರಾಜಾಗಿಲ್ಲ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ್ ಕುಮಾರ್, ಪಕ್ಷದ ಮುಖಂಡರಾದ ಎಸ್.ರಾಜು ಪೂಜಾರಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ ಶೆಟ್ಟಿ, ನಾಗರಾಜ ಗಾಣಿಗ, ಜಗದೀಶ ದೇವಾಡಿಗ, ಮೋಹನ ಪೂಜಾರಿ ಉಪ್ಪುಂದ, ಪ್ರಚಾರ ಸಮಿತಿಯ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.