ಕೋಟ: ಸಾಂಬಾರಿಗೆ ಗಾಜಿನ ಚೂರು ಹಾಕಿ ಸಂಬಂಧಿಕರ ಕೊಲೆಗೆ ಯತ್ನ; ಆರೋಪಿ ವಿಜೇಂದ್ರ ಬಂಧನ

ಕೋಟ, ಎ.19: ಅಡುಗೆ ಮನೆಯಲ್ಲಿಟ್ಟಿದ್ದ ಸಾಂಬಾರಿಗೆ ಗಾಜಿನ ಚೂರುಗಳನ್ನು ಹಾಕಿ ಸಂಬಂಧಿಕರ ಕೊಲೆಗೆ ಯತ್ನಿಸುತ್ತಿದ್ದ ಆರೋಪದಡಿ ಯುವಕನೋರ್ವನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಕೋಟತಟ್ಟು ಪಡುಕೆರೆ ನಿವಾಸಿ ವಿಜೇಂದ್ರ (28) ಬಂಧಿತ ಆರೋಪಿ.
ಗಾರೆ ಕೆಲಸ ಮಾಡಿಕೊಂಡಿದ್ದ ಈತ ತನ್ನ ಮನೆಯ ಸಮೀಪದಲ್ಲಿರುವ ದೂರದ ಸಂಬಂಧಿ ಗೀತಾ ಎಂಬವರ ಮನೆಗೆ ಬಂದು ಹೋಗುತ್ತಿದ್ದನು. ಮಾ.12ರಂದು ಗೀತಾ ಮನೆಯವರು ಊಟ ಮಾಡುವಾಗ ಅನ್ನದಲ್ಲಿ ಹಾಗೂ ಸಾಂಬಾರಿನಲ್ಲಿ ಗಾಜಿನ ಚೂರುಗಳು ಕಂಡು ಬಂದವು.
ಮಾ.15 ಮತ್ತು 18ರಂದು ರಾತ್ರಿ ಊಟ ಮಾಡುವಾಗ ಮತ್ತೆ ಅನ್ನದಲ್ಲಿ ಗಾಜಿನ ಚೂರುಗಳು ಸಿಕ್ಕಿದವು. ಈ ಬಗ್ಗೆ ವಿಜೇಂದ್ರ ಮೇಲೆ ಸಂಶಯಗೊಂಡ ಗೀತಾ ಮನೆಯವರು ಸಾಕ್ಷಿ ಸಮೇತ ಪತ್ತೆ ಹಚ್ಚಲು ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮೆರಾವನ್ನು ಅಡಗಿಸಿ ಇಟ್ಟು ರೆಕಾರ್ಡ್ ಮಾಡಿದ್ದರು. ವಿಜೇಂದ್ರ ಎ.17ರಂದು ಸಂಜೆ ಗೀತಾ ಅವರ ಮನೆಗೆ ಬಂದಿದ್ದು, ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ಹೋದ ಆತ, ಸಾಂಬಾರಿಗೆ ಗಾಜಿನ ಚೂರುಗಳನ್ನು ಹಾಕಿದ್ದನು. ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇದಕ್ಕೆ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.