ಮೋದಿಗೆ ಯುದ್ಧ ನಿಲ್ಲಿಸುವ ಶಕ್ತಿ ಇದ್ದರೆ, ಸುಡಾನ್ ಯುದ್ಧ ನಿಲ್ಲಿಸಿ ನಮ್ಮ ಜನರನ್ನು ಕರೆತರಲಿ: ಕಾಂಗ್ರೆಸ್ ಒತ್ತಾಯ

ಬೆಂಗಳೂರು, ಎ.19: ಪ್ರಧಾನಿ ಮೋದಿಗೆ ಯುದ್ಧ ನಿಲ್ಲಿಸುವ ಶಕ್ತಿ ಇದ್ದರೆ, ಸುಡಾನ್‍ನಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧ ನಿಲ್ಲಿಸಿ, ನಮ್ಮ ಜನರನ್ನು ಸುರಕ್ಷಿತವಾಗಿ ಕರೆತರಲಿ ಎಂದು ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ತಿಳಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಆಫ್ರಿಕಾದ ಸುಡಾನ್ ದೇಶದಲ್ಲಿ ನಾಗರಿಕ ಧಂಗೆ ಉದ್ಭವಿಸಿದ್ದು, ರಾಜ್ಯದ ಹಕ್ಕಿಪಿಕ್ಕಿ ಸಮಾಜದ 31 ಮಂದಿ ಸಿಲುಕಿದ್ದಾರೆ. ಇವರನ್ನು ರಕ್ಷಿಸಿ ಭಾರತಕ್ಕೆ ಸುರಕ್ಷಿತವಾಗಿ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಯುದ್ಧ ಭೀತಿಯಲ್ಲಿ ಸಿಲುಕಿರುವ ರಾಜ್ಯದ ಅಕ್ಕಿಪಿಕ್ಕಿ ಸಮುದಾಯದ ಜನರನ್ನು ರಕ್ಷಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದಾಗ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಸಿಟ್ಟಿನಿಂದ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ. ಈ ವಿಚಾರವಾಗಿ ಕೇಂದ್ರ ಸಚಿವರಿಗೆ ಅಕ್ಕಿ ಪಿಕ್ಕಿ ಸಮುದಾಯದ ಜನರಿಗೆ ಆ ದೇಶದಲ್ಲಿ ಅಗತ್ಯವಿರುವ ನೆರವಿನ ಬಗ್ಗೆ ಕನಿಷ್ಠ ಮಾಹಿತಿ ಇದೆಯಾ ಎಂದು ರಾಜೀವ್ ಗೌಡ ಪ್ರಶ್ನಿಸಿದರು.
ಈ ಹಿಂದೆ ವಿದೇಶದಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾಗ ಟ್ವಿಟರ್ ಮೂಲಕ ತಮಗೆ ನೆರವು ಬೇಕು ಎಂದು ಭಾರತ ಸರಕಾರವನ್ನು ಸಂಪರ್ಕಿಸುತ್ತಿದ್ದರು. ಈಗ ಸರಕಾರ ಅದನ್ನು ಮರೆತಿದ್ದಾರಾ, ಸಿದ್ದರಾಮಯ್ಯನವರು ಅಲ್ಲಿರುವ ರಾಜ್ಯದ ಜನರನ್ನು ಸುರಕ್ಷಿತವಾಗಿ ಕರೆತನ್ನಿ ಎಂದು ಸೌಜನ್ಯಯುತವಾಗಿ ಕೇಳಿದರೆ ಈ ರೀತಿ ಉತ್ತರ ನೀಡುವುದು ಸರಿಯೇ, ಸುಡಾನ್‍ನಲ್ಲಿರುವ ನಮ್ಮ ಜನರ ಪರಿಸ್ಥಿತಿ ಬಗ್ಗೆ ಕೇಂದ್ರ ಸರಕಾರಕ್ಕೆ ಯಾವುದಾದರೂ ಮಾಹಿತಿ ಇದೆಯಾ ಎಂದು ರಾಜೀವ್ ಗೌಡ ಪ್ರಶ್ನಿಸಿದರು.
ವಿದೇಶದಲ್ಲಿರುವ ಭಾರತೀಯರ ಸ್ಥಳಾಂತರ ವಿಚಾರವನ್ನು ರಾಜಕೀಯಗೊಳಿಸುವ ವಿಚಾರವಾಗಿ ಮಾತನಾಡುವುದಾದರೆ, ಬಿಜೆಪಿ ರಾಷ್ಟ್ರೀಯ ಟ್ವಿಟರ್ ಖಾತೆಯಲ್ಲಿ ಜೆ.ಪಿ. ನಡ್ಡಾ ಅವರು ರಾಜ್ಯದಲ್ಲಿ ಭಾಷಣ ಮಾಡುತ್ತಾ, ಮೋದಿ ಅವರು ರಷ್ಯಾ ಉಕ್ರೇನ್ ಯುದ್ಧ ತಡೆದು 22,500 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇವರು ಹೇಳುವಂತೆ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಯುದ್ಧವನ್ನು ನಿಲ್ಲಿಸಲಾಗಿತ್ತಾ, ಮೋದಿ ಅವರಿಗೆ ಆ ಶಕ್ತಿ ಇದೆಯಾ, ಭಾರತೀಯರ ಸ್ಥಳಾಂತರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವವರು ಯಾರು ಎಂದು ರಾಜೀವ್ ಗೌಡ ಪ್ರಶ್ನಿಸಿದರು.
ವಿದೇಶಾಂಗ ಸಚಿವರು ಟ್ವಿಟರ್‍ನಲ್ಲಿ ಈ ರೀತಿ ಆಟವಾಡುವ ಬದಲು, ಜವಾಬ್ದಾರಿ ನಿಭಾಯಿಸಿ ಕೆಲಸ ಮಾಡಿದರೆ ಉತ್ತಮ. ಅವರು ಸೌಜನ್ಯತೆ ಕಲಿತು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ಅಪಮಾನ ಮಾಡುವುದನ್ನು ನಿಲ್ಲಿಸಲಿ. ನಮ್ಮ ರಾಜ್ಯದ ಜನರನ್ನು ಸುರಕ್ಷಿತವಾಗಿ ಕರೆತನ್ನಿ ಎಂಬುದು ನಮ್ಮ ಬೇಡಿಕೆ ಎಂದು ರಾಜೀವ್ ಗೌಡ ತಿಳಿಸಿದರು.
ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, ಕನ್ನಡಿರಗ ಅಸ್ಮಿತೆ ಬಗ್ಗೆ ಯಾವಾಗಲೇ ಪ್ರಶ್ನೆ ಉದ್ಭವಿಸಿದರೂ ಬಿಜೆಪಿ ಮೌನವಾಗುತ್ತದೆ. ಆದರೆ 40 ಪರ್ಸೆಂಟ್ ಕಮಿಷನ್ ವಿಚಾರವಾದರೆ ಎಲ್ಲಿಲ್ಲದ ಆಸಕ್ತಿ ತೋರುತ್ತಾರೆ. ಲೋಕಸಭೆಯಲ್ಲಿ 26 ಬಿಜೆಪಿ ಸಂಸದರಿದ್ದು, ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಹರಿಹಾಯ್ದರು.
ಇತ್ತೀಚಿನ 10 ದಿನಗಳಲ್ಲಿ ಕರ್ನಾಟಕದ ಅಸ್ಮಿತೆ ಹಾಗೂ ಹೆಮ್ಮೆಗೆ ಬಿಜೆಪಿ ಧಕ್ಕೆ ತಂದಿರುವ ಉದಾಹರಣೆ ನೀಡುತ್ತೇನೆ. ಮಹಾರಾಷ್ಟ್ರ ಸರಕಾರ ತನ್ನ ರಾಜ್ಯದ ವಿಮಾ ಯೋಜನೆಯನ್ನು ರಾಜ್ಯದ 865 ಹಳ್ಳಿಗಳಲ್ಲಿ ಜಾರಿಗೆ ಮುಂದಾಗಿದೆ. 40ಪರ್ಸೆಂಟ್ ಸರಕಾರ ಈ ವಿಚಾರದಲ್ಲಿ ಯಾವುದೇ ಚಕಾರ ಎತ್ತಲಿಲ್ಲ. ‘ನಂದಿನಿ’ ಮೇಲೆ ದಾಳಿ ನಡೆಯುವ ಷಡ್ಯಂತ್ರ ನಡೆದಾಗಲೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಇನ್ನು ಸಿಆರ್‍ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವಿಲ್ಲ ಎಂದಾಗಲೂ ಬಿಜೆಪಿ ಬಾಯಿಗೆ ಬೀಗ ಹಾಕಿಕೊಂಡಿತ್ತು. ಈಗ 31 ಹಕ್ಕಿ ಪಿಕ್ಕಿ ಸಮುದಾಯದ ಜನ ಸುಡಾನ್‍ನಲ್ಲಿ ಸಿಲುಕಿರುವಾಗ ಬಿಜೆಪಿ ನಾಲಿಗೆ ಬಿದ್ದವರಂತೆ ವರ್ತಿಸುತ್ತಿದೆ ಎಂದು ಗೌರವ್ ವಲ್ಲಭ್ ಆರೋಪಿಸಿದರು.