ವಿಧಾನಸಭಾ ಚುನಾವಣೆ: ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಪ್ರಾದೇಶಿಕ ಆಯುಕ್ತರ ಸಲಹೆ

ಮಂಗಳೂರು : ಮತದಾರರ ಪಟ್ಟಿಯಲ್ಲಿರುವ 80ಕ್ಕೂ ಅಧಿಕ ವಯಸ್ಸಿನ ಮತದಾರರಿಗೆ ಮನೆಯಿಂದಲೇ ಮತ ದಾನ ಮಾಡಲು ಚುನಾವಣಾ ಆಯೋಗ ಈ ಬಾರಿ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗಾಗಿ ಅಧಿಕಾರಿ, ಸಿಬ್ಬಂದಿ ಗಳು ಚುನಾವಣಾ ಕರ್ತವ್ಯವನ್ನು ಎಚ್ಚರಿಕೆಯಿಂದ ಮಾಡಬೇಕು. ಮತದಾನದ ಪ್ರಕ್ರಿಯೆಯಿಂದ ಯಾರೂ ಹೊರ ಗುಳಿಯದಂತೆ ನೋಡಿಕೊಳ್ಳಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಚುನಾವಣಾಗೆ ಸಂಬಂಧಿಸಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
80 ವರ್ಷ ಪ್ರಾಯ ದಾಟಿದವರಿಗೆ, ವಿಕಲಚೇತನರಿಗೆ ಈ ಬಾರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಗಳನ್ನು ನಿರ್ವಹಿಸುವಾಗ ಎಲ್ಲಾ ಅಗತ್ಯ ಜಾಗೃತಿ ವಹಿಸಬೇಕು. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಪ್ರತಿಯೊಬ್ಬರು ಶ್ರಮಿಸಬೇಕು. ಈ ಪ್ರಕ್ರಿಯೆಗಳಲ್ಲಿ ನಿಯೋಜನೆಗೊಂಡಿರು ವವರು ಚುನಾವಣಾ ಆಯೋಗ ಆಗಿಂದಾಗ್ಗೆ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದರು.
ದ.ಕ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ದ.ಕ.ಜಿಪಂ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸುಳ್ಯ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವೆಚ್ಚವೀಕ್ಷಕರು, ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ವಿವಿಧ ನೋಡೆಲ್ ಅಧಿಕಾರಿಗಳು ಭಾಗವಹಿಸಿದ್ದರು.







