ಬಿಗಿಭದ್ರತೆಯ ನಡುವೆ ಶ್ವೇತಭವನದ ಒಳನುಸುಳಿದ ಮಗು

ವಾಷಿಂಗ್ಟನ್, ಎ.19: ಅತ್ಯಂತ ಬಿಗಿಭದ್ರತೆಯ ಅಮೆರಿಕದ ಶ್ವೇತಭವನದ ಒಳಗೆ ಮಗುವೊಂದು ನುಸುಳಿದ ಘಟನೆ ಮಂಗಳವಾರ ವರದಿಯಾಗಿದೆ.
ಅಮೆರಿಕ ಅಧ್ಯಕ್ಷರ ಸರಕಾರಿ ನಿವಾಸವಾಗಿರುವ ಶ್ವೇತಭವನದ ಉತ್ತರದ ದಿಕ್ಕಿನಲ್ಲಿರುವ ಕಬ್ಬಿಣದ ತಡೆಬೇಲಿಯ ಎಡೆಯಿಂದ ಮಗುವೊಂದು ಒಳನುಸುಳಿ ಬಂದಿದೆ. ತಕ್ಷಣ ಭದ್ರತಾ ಸಿಬಂದಿ ಮಗುವನ್ನು ಹೊರಗೆತ್ತಿಕೊಂಡು ಹೋಗಿ ಅದರ ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಶ್ವೇತಭವನದ ಗುಪ್ತಚರ ವಿಭಾಗದ ಮುಖ್ಯಸ್ಥ ಆಂಥೊನಿ ಗ್ಯುಗ್ಲಿಯೆಮಿಯನ್ನು ಉಲ್ಲೇಖಿಸಿದ ಸಿಎನ್ಎನ್ ವರದಿ ಹೇಳಿದೆ.
ಮಗು ಒಳನುಸುಳಿರುವುದು ಗಮನಕ್ಕೆ ಬಂದೊಡನೆ ಶ್ವೇತಭವನದ ಅಧಿಕಾರಿಗಳು ಶ್ವೇತಭವನದ ಆವರಣಕ್ಕೆ ಪ್ರವಾಸಿಗಳ ಆಗಮನವನ್ನು ಕೆಲಸಮಯ ನಿರ್ಬಂಧಿಸಿ ತಪಾಸಣೆ ನಡೆಸಿದರು. ಬಳಿಕ ಮಗುವಿನ ಪಾಲಕರನ್ನು ವಿಚಾರಣೆಗೆ ಒಳಪಡಿಸಿ, ಆಕಸ್ಮಿಕ ಘಟನೆ ಎಂದು ಖಾತರಿಯಾದ ಬಳಿಕ ಮಗುವನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ವರದಿ ಹೇಳಿದೆ. 2014ರಲ್ಲಿ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಮಗುವೊಂದು ಶ್ವೇತಭವನದ ಒಳನುಸುಳಿತ್ತು. ಇತ್ತೀಚಿನ ವರ್ಷಗಳಲ್ಲಿ ಹಲವು ಭಾರಿ ಶ್ವೇತಭವನದ ಆವರಣದೊಳಗೆ ಅಪರಿಚಿತರು ನುಗ್ಗಿದ ಪ್ರಕರಣದ ಬಳಿಕ ಶ್ವೇತಭವನದ ಆವರಣದ ತಡೆಬೇಲಿಯನ್ನು 13 ಅಡಿಗೆ ಎತ್ತರಿಸಲಾಗಿದೆ.