ಸುಳ್ಳುಸುದ್ದಿ ಹರಡಿದ್ದಕ್ಕಾಗಿ 787 ದಶಲಕ್ಷ ಡಾಲರ್ ಪಾವತಿಗೆ ಫಾಕ್ಸ್ ನ್ಯೂಸ್ ಸಂಸ್ಥೆ ಒಪ್ಪಿಗೆ

ವಾಷಿಂಗ್ಟನ್, ಎ.19: 2020ರ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಸುದ್ಧಿ ಪ್ರಸಾರ ಮಾಡಿರುವುದನ್ನು ಒಪ್ಪಿಕೊಂಡ ಅಮೆರಿಕದ ಫಾಕ್ಸ್ ನ್ಯೂಸ್ ಸಂಸ್ಥೆಯು ಇದಕ್ಕಾಗಿ ವಿದ್ಯುನ್ಮಾನ ಮತಯಂತ್ರ ಉತ್ಪಾದಿಸುವ `ಡೊಮಿನಿಯನ್ ವೋಟಿಂಗ್ ಸಿಸ್ಟಮ್ಸ್'ಗೆ 787.5 ದಶಲಕ್ಷ ಡಾಲರ್ ಪಾವತಿಸಲು ಸಮ್ಮತಿಸಿದೆ ಎಂದು ವರದಿಯಾಗಿದೆ.
2020ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ ಬೈಡನ್ ಎದುರು ಸೋಲುಂಡಿದ್ದರು. ಆದರೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಕ್ರಮ ನಡೆಸಿ ತನ್ನ ಗೆಲುವನ್ನು ಕಸಿದುಕೊಳ್ಳಲಾಗಿದೆ. ಡೊಮಿನಿಯನ್ ಸಂಸ್ಥೆ ನಿರ್ಮಿಸಿರುವ ವಿದ್ಯುನ್ಮಾನ ಮತಯಂತ್ರಗಳಲ್ಲಿರುವ ಗುಪ್ತವ್ಯವಸ್ಥೆಯಿಂದಾಗಿ ಒಬ್ಬನ ಪರವಾಗಿ ಚಲಾವಣೆಗೊಂಡ ಮತಗಳನ್ನು ಮತ್ತೊಬ್ಬ ಅಭ್ಯರ್ಥಿಯ ಖಾತೆಗೆ ವರ್ಗಾಯಿಸಬಹುದು. ಈ ಅಕ್ರಮ ನಡೆಸಿ ಮಿಷಿಗನ್ನ ಆಂಟ್ರಿಮ್ ಕೌಂಟಿಯಲ್ಲಿ ತನ್ನ ಹೆಸರಿಗೆ ಚಲಾವಣೆಗೊಂಡ ಎಲ್ಲಾ ಮತಗಳೂ ಇದಿರಾಳಿಗೆ ಸಂದಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದರು.
ಇದೇ ಹೇಳಿಕೆಯನ್ನು ಫಾಕ್ಸ್ ನ್ಯೂಸ್ ವರದಿ ಮಾಡಿತ್ತು. ಈ ವರದಿಯನ್ನು ಆಕ್ಷೇಪಿಸಿದ್ದ ಡೊಮಿನಿಯನ್, ಫಾಕ್ಸ್ ನ್ಯೂಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಮೊಕದ್ದಮೆಯ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಫಾಕ್ಸ್ ನ್ಯೂಸ್, 787 ದಶಲಕ್ಷ ಡಾಲರ್ ಪಾವತಿಸಲು ಸಮ್ಮತಿಸಿದೆ ಎಂದು ವರದಿಯಾಗಿದೆ.