ಕೈ ತಪ್ಪಿದ ಟಿಕೆಟ್: ಜೆಡಿಎಸ್ ಗೆ ರಾಜೀನಾಮೆ ಘೋಷಿಸಿದ ಮಂಡ್ಯ ಶಾಸಕ ಎಂ. ಶ್ರೀನಿವಾಸ್

ಮಂಡ್ಯ, ಎ.19: ಬೇರೆಯವರಿಗೆ ಟಿಕೆಟ್ ಕೊಟ್ಟಿರುವ ಜೆಡಿಎಸ್ ವರಿಷ್ಠರ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಹಾಲಿ ಮಂಡ್ಯ ಶಾಸಕ ಎಂ. ಶ್ರೀನಿವಾಸ್, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಸುವುದಾಗಿ ಘೋಷಣೆ ಮಾಡಿದ್ದಾರೆ.
ಪಕ್ಷದ ಅಭ್ಯರ್ಥಿಯಾಗಿ ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ ಅವರಿಗೆ ಪಕ್ಷ ಬಿ ಫಾರಂ ಕೊಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದರು.
ಪಕ್ಷವು ನನಗೆ ಮೊದಲು ಟಿಕೆಟ್ ಘೋಷಣೆ ಮಾಡಿ ಈಗ ಹಣ ಕೊಟ್ಟವರಿಗೆ ಬಿ ಫಾರಂ ಮಾರಕೊಂಡಿದೆ. 'ಇಂತಹ ನಮಾಕ್ ಹರಾಮ್ ಪಕ್ಷ ಸೋಲಿಸಲು ಸ್ವಾಭಿಮಾನಿಯಾಗಿ ನಾಳೆ ನನ್ನ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಸುತ್ತಿದ್ದೇವೆ' ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
35 ವರ್ಷದಿಂದ ಪಕ್ಷಕ್ಕೆ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿ ಜನರ ಪ್ರೀತಿ ಗಳಿಸಿದ್ದೇನೆ. ಈಗ ಹಣಕ್ಕೋಸ್ಕರ ಟಿಕೆಟ್ ಮಾರಿಕೊಳ್ಳಲಾಗಿದೆ. ಇಂತಹ ಕೆಲಸವನ್ನು ಮಾಡಬಾರದು ಎಂದು ಅವರು ಜೆಡಿಎಸ್ ವರಿಷ್ಠರಿಗೆ ಸಲಹೆ ನೀಡಿದರು.
ನಾಳೆ ಬೆಳಗ್ಗೆ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಭಿಮಾನಿಗಳ ಜೊತೆ ಮೆರವಣಿಗೆಯಲ್ಲಿ ತೆರಳಿ ಸ್ವಾಭಿಮಾನಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇವೆ ಎಂದು ಶ್ರೀನಿವಾಸ್ ಹೇಳಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರ ಅಳಿಯ ಹಾಗೂ ಜಿಪಂ ಮಾಜಿ ಸದಸ್ಯ ಎಚ್. ಎನ್ ಯೋಗೀಶ್, ನಗರಸಭೆ ಅಧ್ಯಕ್ಷ ಮಂಜು, ಇತರೆ ಮುಖಂಡರು ಉಪಸ್ಥಿತರಿದ್ದರು.







