ಕೊರಟಗೆರೆ: ನಾಮಪತ್ರ ಸಲ್ಲಿಸುವ ವೇಳೆ ಕಲ್ಲೆಸೆತ, ಮಹಿಳಾ ಪೇದೆಗೆ ಗಾಯ

ತುಮಕೂರು.ಎ.19: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬನು ಎಸೆದ ಕಲ್ಲು ಮಹಿಳಾ ಪೊಲೀಸ್ ಪೇದೆಯೊಬ್ಬರ ಹಣೆಗೆ ಬಡಿದು, ರಕ್ತಗಾಯವಾಗಿರುವ ಘಟನೆ ಇಂದು ನಡೆದಿದೆ.
ಕೊರಟಗೆರೆ ಪಟ್ಟಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ಬಿ.ಎಲ್.ಶಂಕರ್,ಡಾ.ಎಲ್.ಹನುಮಂತಯ್ಯ, ವೇಣುಗೋಪಾಲ್ ಅವರೊಂದಿಗೆ ಚುನಾವಣಾಧಿಕಾರಿಯ ಕಚೇರಿಗೆ ತೆರಳಿದ ವೇಳೆ ತಾಲೂಕು ಕಚೇರಿಯ ಗೇಟ್ ಬಳಿ ನೆರೆದಿದ್ದ ಕಿಡಿಗೇಡಿಯೊಬ್ಬ ಎಸೆದ ಕಲ್ಲು, ಕೋಳಾಲ ಪೊಲೀಸ್ ಠಾಣೆಯ ಮಹಿಳಾ ಪೇದೆ ಮಾಲಾಶ್ರೀ. ಡಿ. ಅವರ ಹಣೆಗೆ ಬಡಿದಿದ್ದು,ರಕ್ತಗಾಯವಾಗಿದೆ.ಕಲ್ಲು ಹಣೆಗೆ ಬಡಿದಿದ್ದರಿಂದ ಕುಸಿದು ಬಿದ್ದ ಅವರನ್ನು ಸ್ಥಳದಲ್ಲಿದ್ದ ಪೊಲೀಸರು ಉಪಚರಿಸಿ, ಪೊಲೀಸ್ ವಾಹನದಲ್ಲಿ ಸರಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ರಾಹುಲ್‍ಕುಮಾರ್ ಶಹಾಪೂರ್‍ವಾಡ್ ಈ ಸಂಬಂದ ತನಿಖೆಗೆ ನಡೆಸಿ, ವಿಡಿಯೋ ಪೂಟೇಜ್‍ಗಳನ್ನು ನೋಡಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.





