ತುಮಕೂರು: ವಿದ್ಯುತ್ ಆಘಾತಕ್ಕೆ ಇಬ್ಬರು ಬಾಲಕರು ಬಲಿ
ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ತುಮಕೂರು, ಎ.20: ಮನೆಯ ಮಹಡಿಯ ಮೇಲೆ ಆಟವಾಡುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತುಮಕೂರು ತಾಲೂಕಿನ ಬೆಳಗುಂಬಾ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ವೀರಭದ್ರಪ್ಪ ಎಂಬವರ ಪುತ್ರ ಯತೀಶ್ ವಿ.(14) ಹಾಗೂ ಸಿದ್ದಲಿಂಗಯ್ಯ ಎಂಬವರ ಪುತ್ರ ಪ್ರಜ್ವಲ್(14) ಎಂದು ಗುರುತಿಸಲಾಗಿದೆ. ಅಕ್ಕಪಕ್ಕದ ಮನೆಯ ಮಕ್ಕಳಾದ ಇವರಿಬ್ಬರು 8ನೇ ತರಗತಿ ವಿದ್ಯಾರ್ಥಿಗಳಾಗಿದ್ದರು.
ಬೆಳಗುಂಬಾ ಗ್ರಾಮದ ಸಿದ್ದರಾಮಶ್ವರ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ.
ಮನೆಯ ಟೆರೇಸ್ ಗೆ ಹೊಂದಿಕೊಂಡೇ ವಿದ್ಯುತ್ ತಂತಿ ಹಾದು ಹೋಗಿದ್ದು, ಇಂದು ಬೆಳಗ್ಗೆ ಟೆರೇಸ್ ನಲ್ಲಿ ಆಡುತ್ತಿದ್ದ ಯತೀಶ್ ಹಾಗೂ ಪ್ರಜ್ವಲ್ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸ್ಪರ್ಶಕ್ಕೆ ಒಳಗಾಗಿದ್ದರೆನ್ನಲಾಗಿದೆ. ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಇಬ್ಬರು ಬಾಲಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಾಲಕರ ಸಾವಿಗೆ ಬೆಸ್ಕಾಂ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.








