ಎಂ.ಎಂ. ಕಲಬುರ್ಗಿ ಹಣೆಗೆ, ಜಗದೀಶ್ ಶೆಟ್ಟರ್ ಎದೆಗೆ ಬಿದ್ದ ಗುಂಡು

ಎಂ.ಎಂ. ಕಲಬುರ್ಗಿ ಹತ್ಯೆಯ ಮೂಲಕ ಸಾಂಸ್ಕೃತಿಕ ವಲಯಕ್ಕೆ ಯಾವ ಸಂದೇಶವನ್ನು ರವಾನಿಸಲಾಗಿತ್ತೋ, ಅದರ ರಾಜಕೀಯ ಸಂದೇಶವನ್ನು ಜಗದೀಶ್ ಶೆಟ್ಟರ್ ಅವರ ಪ್ರಕರಣದಲ್ಲಿ ರವಾನಿಸಲಾಗಿದೆ. 2017ರ ಸೆಪ್ಟಂಬರ್ 5ರಂದು ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸಂದೇಶ ಕೂಡ ಅದೇ ಆಗಿತ್ತು ಎನ್ನುವುದನ್ನು ಈಗ ಲಿಂಗಾಯತ ಸಮುದಾಯದ ಸ್ವಾಮೀಜಿಗಳು, ಚಿಂತಕರು ಬಹಿರಂಗವಾಗಿ ಬಾಯಿ ಬಿಟ್ಟು ಮಾತನಾಡುತ್ತಿದ್ದಾರೆ.
30 ಆಗಸ್ಟ್ 2015ರಂದು ಧಾರವಾಡದ ಮನೆಯಲ್ಲಿ ಸಂಶೋಧಕ, ಶರಣ ಎಂ.ಎಂ. ಕಲಬುರ್ಗಿ ಅವರ ಹಣೆಗೆ ಗುಂಡು ಹೊಡೆದದ್ದರ ಸಂದೇಶ ಏನಾಗಿತ್ತು?
18 ಎಪ್ರಿಲ್ 2023ರಂದು ಹುಬ್ಬಳ್ಳಿಯ ನಿವಾಸದಲ್ಲಿ ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯಲ್ಲಿ ಹೊರಹೊಮ್ಮಿದ ಸಂದೇಶವೂ ಅದೇ ಆಗಿದೆ.
ಎಂ.ಎಂ. ಕಲಬುರ್ಗಿ ಹತ್ಯೆಯ ಮೂಲಕ ಸಾಂಸ್ಕೃತಿಕ ವಲಯಕ್ಕೆ ಯಾವ ಸಂದೇಶವನ್ನು ರವಾನಿಸಲಾಗಿತ್ತೋ, ಅದರ ರಾಜಕೀಯ ಸಂದೇಶವನ್ನು ಜಗದೀಶ್ ಶೆಟ್ಟರ್ ಅವರ ಪ್ರಕರಣದಲ್ಲಿ ರವಾನಿಸಲಾಗಿದೆ. 2017ರ ಸೆಪ್ಟಂಬರ್ 5ರಂದು ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸಂದೇಶ ಕೂಡ ಅದೇ ಆಗಿತ್ತು ಎನ್ನುವುದನ್ನು ಈಗ ಲಿಂಗಾಯತ ಸಮುದಾಯದ ಸ್ವಾಮೀಜಿಗಳು, ಚಿಂತಕರು ಬಹಿರಂಗವಾಗಿ ಬಾಯಿ ಬಿಟ್ಟು ಮಾತನಾಡುತ್ತಿದ್ದಾರೆ.
ಗೌರಿ ಲಂಕೇಶ್ ಮತ್ತು ಎಂ.ಎಂ. ಕಲಬುರ್ಗಿ ಸಂಘ ಪರಿವಾರ ಸಿದ್ಧಾಂತದ ಕಟು ಟೀಕಾಕಾರರಾಗಿದ್ದರು. ಎಂ.ಎಂ. ಕಲಬುರ್ಗಿ ಅವರು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಂಶೋಧನೆ ಮತ್ತು ಚರಿತ್ರೆಯನ್ನು ಮುಂದಿಟ್ಟು ಸಂಘ ಪರಿವಾರದ ಸೈದ್ಧಾಂತಿಕ ನಿಲುವುಗಳ ಆಳ-ಅಗಲವನ್ನು ಮಂಡಿಸುತ್ತಿದ್ದರು. ಗೌರಿ ಲಂಕೇಶ್ ಸಂಘ ಪರಿವಾರ ಸಿದ್ಧಾಂತದ ರಾಜಕೀಯ ಮುಖವಾಣಿ ಬಿಜೆಪಿಯ ರಾಜಕೀಯ ಅಜೆಂಡಾಗಳನ್ನು ಎಂ.ಎಂ. ಕಲಬುರ್ಗಿಯವರಷ್ಟೇ ತೀವ್ರವಾಗಿ ವಿರೋಧಿಸುತ್ತಿದ್ದರು.
ಆದರೆ, ಸಂಘ ಪರಿವಾರದ ಸಿದ್ಧಾಂತವನ್ನು, ಸೈದ್ಧಾಂತಿಕವಾಗಿಯೇ ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ರಿಗಿಂತ ತೀವ್ರವಾಗಿ ಟೀಕಿಸುತ್ತಿದ್ದ ಇತರ ಪ್ರಗತಿಪರ ಧ್ವನಿಗಳು ಇವರಿಬ್ಬರ ಹತ್ಯೆ ನಡೆಯುವ ಸಂದರ್ಭದಲ್ಲೂ ಇದ್ದವು. ಈಗಲೂ ಇವೆ. ಹಾಗಿದ್ದೂ ಹತ್ಯೆಗೆ ಇವರಿಬ್ಬರನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಏಕೆಂದರೆ, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಇಬ್ಬರೂ ಲಿಂಗಾಯತ ಸಮುದಾಯದವರು. ಕರ್ನಾಟಕದಲ್ಲಿ ಜಾತಿಯಿಂದಲೂ, ರಾಜಕೀಯವಾಗಿಯೂ ಪ್ರಬಲವಾಗಿರುವ ಸಮುದಾಯದ ಹಣೆಗೆ, ಎದೆಗೆ ಗುಂಡಿಟ್ಟರೆ ಇನ್ನುಳಿದ ಸಮುದಾಯಗಳ ಪ್ರತಿರೋಧದ ಧ್ವನಿಗಳು ತಂತಾನೇ ಕ್ಷೀಣಿಸುತ್ತವೆ, ತಣ್ಣಗಾಗುತ್ತವೆ ಎನ್ನುವ ಮರ್ಡರ್ ಇಂಜಿನಿಯರಿಂಗ್ ತಿಳಿವಳಿಕೆ ಇವರಿಬ್ಬರ ಹತ್ಯೆಯ ಹಿಂದೆ ಕೆಲಸ ಮಾಡಿದ್ದರೆ...
ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಮುಂತಾದ ಲಿಂಗಾಯತ ನಾಯಕರ ಟಿಕೆಟ್ ತಪ್ಪಿಸಿ ರಾಜಕೀಯವಾಗಿ ಕೊಂದು ಹಾಕಿದರೆ, ಇತರ ಜಾತಿಗಳವರ ಟಿಕೆಟ್ ತಪ್ಪಿದರೂ ದೊಡ್ಡ ಮಟ್ಟದ ಪ್ರತಿರೋಧದ ಧ್ವನಿ ಹೊರಗೆ ಬರುವುದಿಲ್ಲ ಎನ್ನುವ ರಾಜಕೀಯ ಇಂಜಿನಿಯರಿಂಗ್ ಬಿಜೆಪಿಯ ಟಿಕೆಟ್ ಹಂಚಿಕೆಯಲ್ಲಿ ಕೆಲಸ ಮಾಡಿದೆ ಎನ್ನುವುದು ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯ ಧ್ವನಿಯೂ ಆಗಿದೆ.
ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಮೂಲಕ ಇತರ ಪ್ರಗತಿಪರ ಧ್ವನಿಗಳನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾದ ಕಾರ್ಯಾಚರಣೆ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರ ರಾಜಕೀಯ ಬೇರುಗಳನ್ನು ಕತ್ತರಿಸುವ ಕಾರ್ಯಾಚರಣೆಯಲ್ಲಿ ವಿಫಲವಾಗಿದ್ದು ಮಾತ್ರವಲ್ಲ, ಅದು ಸದ್ಯಕ್ಕೆ ತಿರುಗು ಬಾಣವಾಗಿದೆ.
ಎಪ್ರಿಲ್ 14ರ ಅಂಬೇಡ್ಕರ್ ಜಯಂತಿ ದಿನವೇ ಮೂಡಿಗೆರೆಯ ಶಾಸಕ ಕುಮಾರಸ್ವಾಮಿ ಮತ್ತು ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರಿಗೆ ಟಿಕೆಟ್ ತಪ್ಪಿಸಿದರೂ ಸಮುದಾಯದಿಂದ ಸಣ್ಣದೊಂದು ಪ್ರತಿಭಟನಾ ಧ್ವನಿಯೂ ಹೊರಗೆ ಬರಲಿಲ್ಲ. ಬಳಿಕ ಕೆ.ಎಸ್. ಈಶ್ವರಪ್ಪಅವರಿಂದ ನಿವೃತ್ತಿ ಪತ್ರ ಬರೆಸಿಕೊಂಡರೂ ಪ್ರತಿಭಟನೆಗಳು ಕಾಣಲಿಲ್ಲ. ವಿ. ಸೋಮಣ್ಣ ಅವರಿಗೆ ಎರಡು ಕಡೆ ಟಿಕೆಟ್ ನೀಡಿದ್ದರೂ ಎರಡೂ ಕಡೆ ಅವರು ಗೆಲ್ಲುವುದಿಲ್ಲ ಎನ್ನುವುದು ಟಿಕೆಟ್ ಕೊಟ್ಟವರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಹೀಗಾಗಿ ಈ ಚುನಾವಣೆ ಹೆಚ್ಚೂ ಕಡಿಮೆ ವಿ. ಸೋಮಣ್ಣರ ಕುಟುಂಬದ ಕೊನೆ ಚುನಾವಣೆ ಎಂದೇ ಅವರ ಅಭಿಮಾನಿಗಳು ಬೇಸರಿಸಿಕೊಂಡು ಗೊಣಗುತ್ತಿದ್ದಾರೆಯೇ ಹೊರತು ಇಲ್ಲೂ ಪ್ರತಿಭಟನೆಗಳು ಕಾಣಲಿಲ್ಲ. ಆದರೆ, ಸವದಿ ಮತ್ತು ಜಗದೀಶ್ ಶೆಟ್ಟರ್ ಅವರ ವಿಚಾರದಲ್ಲೂ ಇದನ್ನೇ ನಿರೀಕ್ಷಿಸಿದ್ದ ಬಿಜೆಪಿಗೆ ಈಗ ಮರ್ಮಾಘಾತವಾಗಿದೆ.
ಶೆಟ್ಟರ್ ಮತ್ತು ಸವದಿ ಅವರ ನಡೆಯನ್ನು ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಒಲ್ಲದ ಮನಸ್ಸಿನಿಂದ ಟೀಕಿಸುತ್ತಿದ್ದರೂ ಈ ಹೊತ್ತಿನಲ್ಲಿ ಶೆಟ್ಟರ್, ಸವದಿ ಅವರು ಏನನ್ನು ಅನುಭವಿಸಿದ್ದಾರೋ ಅದನ್ನೇ ಯಡಿಯೂರಪ್ಪಅವರು ಕೇವಲ ಎರಡು ತಿಂಗಳ ಹಿಂದಿನವರೆಗೂ ಅನುಭವಿಸಿದ್ದರು ಎಂದು ಶೆಟ್ಟರ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನೆನಪಿಸಿದ್ದಾರೆ.
ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಕೆಳಗಿಳಿಸುವಾಗ ಮಾತ್ರವಲ್ಲ, ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಕೇಂದ್ರ ಸರಕಾರ ಮತ್ತು ಬಿಜೆಪಿಯ ಹೈಕಮಾಂಡ್ನಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ರಾಜ್ಯದಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ, ರಾಜ್ಯದ ಪಾಲಿನ ತೆರಿಗೆಯನ್ನು ಕೊಡುವ ವಿಚಾರದಲ್ಲಿ, ಕೊರೋನ ಸಂಕಷ್ಟಕ್ಕೆ ಆಮ್ಲಜನಕ ಇತ್ಯಾದಿ ನೆರವನ್ನು ಒದಗಿಸುವುದರಲ್ಲಿ, ರಾಜ್ಯದ ಕಾರ್ಯಕ್ರಮಗಳಿಗೆ ಕೇಂದ್ರದ ಅನುದಾನ ಕೊಡುವ ಹೊತ್ತಲ್ಲಿ ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಸಿಕ್ಕಿದ್ದು ಬರೀ ಅಸಹಕಾರ. ಈ ಅಸಹಕಾರದಿಂದ ಬೇಸತ್ತಿದ್ದ ಯಡಿಯೂರಪ್ಪಅವರು ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರ ಎದುರಿಗೇ ಕೇಂದ್ರದಿಂದ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಸಾರ್ವಜನಿಕವಾಗಿ ಪ್ರಶ್ನಿಸಿಬಿಟ್ಟಿದ್ದರು. ಇದಾಗಿ ಮೂರು ತಿಂಗಳಲ್ಲಿ ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು.
ಯಡಿಯೂರಪ್ಪಅವರಿಂದ ತೆರವಾದ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಎದ್ದಾಗಲೇ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ, ಕಾಗೇರಿ, ಸುರೇಶ್ಕುಮಾರ್ ಅವರ ಹೆಸರುಗಳು ಮಾಧ್ಯಮಗಳಲ್ಲಿ ಎರಚಾಡಿದ್ದವು. ಆದರೆ, ವಿಧಾನಸಭೆ ಚುನಾವಣೆಗೆ ಕೇವಲ ಒಂದೂವರೆ ವರ್ಷ ಬಾಕಿ ಇರುವಾಗ ಅಲ್ಪಾವಧಿ ಮುಖ್ಯಮಂತ್ರಿಯಾಗಲು ಇವರ್ಯಾರೂ ದುಡುಕಲಿಲ್ಲ. ಜತೆಗೆ 108 ಸ್ಥಾನ ಗೆಲ್ಲ್ಲಲು ಕಾರಣವಾಗಿದ್ದ ಲಿಂಗಾಯತ ನಾಯಕನನ್ನು ಕೆಳಗಿಳಿಸಿ ಬ್ರಾಹ್ಮಣ ಸಮುದಾಯದ ಒಬ್ಬರನ್ನು ನಾಜೂಕಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರೆ ರಾಜಕೀಯವಾಗಿ ಪ್ರಬಲವಾಗಿರುವ ಲಿಂಗಾಯತ ಸಮುದಾಯ ವಿಧಾನಸಭೆ ಚುನಾವಣೆ ವೇಳೆಗೆ ತಿರುಗಿ ಬೀಳಬಹುದು ಎನ್ನುವ ಮುಂದಾಲೋಚನೆಯಿಂದಲೇ ಬಸವರಾಜ ಬೊಮ್ಮಾಯಿ ಅವರನ್ನು 2023ರ ಮೇ 15ರವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಸಹಿಸಿಕೊಳ್ಳುವ ತೀರ್ಮಾನವಾಗಿತ್ತು.
ಆದರೆ, ಬೊಮ್ಮಾಯಿ ಅವರನ್ನು ಮುಂದಿಟ್ಟು ಉಳಿದ ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮುಗಿಸುವ ಆಟ ಬಿ.ಎಸ್. ಯಡಿಯೂರಪ್ಪಅವರ ಮಟ್ಟಕ್ಕೆ ಮಾತ್ರ ಯಶಸ್ವಿಯಾಗಿತ್ತು. ಯಡಿಯೂರಪ್ಪಅವರನ್ನೇ ತಣ್ಣಗಾಗಿಸಿದ ರಭಸದಲ್ಲೇ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಕಿತ್ತೆಸೆಯುವಾಗ ನಾಜೂಕು ಕಾಣೆಯಾಗಿತ್ತು. ಹೀಗಾಗಿ, ‘‘ನಾನು ಬಿಜೆಪಿ ಬಿಡುತ್ತಿಲ್ಲ. ನನ್ನನ್ನು ಬಿಜೆಪಿಯಿಂದ ಕುತ್ತಿಗೆ ಹಿಡಿದು ಆಚೆಗೆ ದಬ್ಬಿದ್ದಾರೆ’’ ಎಂದು ಸವದಿ ಅಥಣಿಯಲ್ಲಿ ನಡೆಸಿದ ತಮ್ಮ ಅಭಿಮಾನಿ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ನೇರವಾಗಿ, ಬಹಿರಂಗವಾಗಿ ಗುಡುಗಿದರು. ಇದು ಲಿಂಗಾಯತ ಗಾಣಿಗ ಸಮುದಾಯವನ್ನು ವಿಪರೀತ ರೊಚ್ಚಿಗೆಬ್ಬಿಸಿತ್ತು. ಇದು ಗೊತ್ತಾದ ಬಳಿಕವಾದರೂ ಜಗದೀಶ್ ಶೆಟ್ಟರ್ ವಿಚಾರದಲ್ಲಿ ನಾಟಕಕ್ಕಾದರೂ ಸೌಜನ್ಯ ತೋರಿಸಲಿಲ್ಲ.
‘‘ನನಗೆ ಗೌರವಯುತವಾದ ನಿವೃತ್ತಿ ಬೇಕಿತ್ತು’’ ಎಂದು ಶೆಟ್ಟರ್ ಅವರ ಬಾಯಿಂದ ಹೊರಬಿದ್ದ ಮಾತು ಮತ್ತು ಬಿ.ಎಲ್. ಸಂತೋಷ್ ಹಾಗೂ ಪ್ರಹ್ಲಾದ್ ಜೋಶಿ ಅವರನ್ನೇ ಲಿಂಗಾಯತ ಸಮುದಾಯದ ಕಟಕಟೆಗೆ ಎಳೆದು ತಂದು ನಿಲ್ಲಿಸಿದ ಎಪ್ರಿಲ್ 18ರ ಪತ್ರಿಕಾಗೋಷ್ಠಿಯಲ್ಲಿ ಶೆಟ್ಟರ್ ಕಣ್ಣೀರು ಹಾಕಿದ್ದು ಬಿಜೆಪಿಗೆ ದುಬಾರಿಯಾಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ.
ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿ ಬಳಿಕ ಮತ್ತೋರ್ವ ಲಿಂಗಾಯತ ಮುಖಂಡ ಎಂ.ಬಿ. ಪಾಟೀಲ್ ಅವರು ‘‘ಲಿಂಗಾಯತರು ಬಿಜೆಪಿ ಗರ್ಭಗುಡಿಯೊಳಗೆ ನಿಷಿದ್ಧ. ಏನಿದ್ದರೂ ಗರ್ಭಗುಡಿ ಹೊರಗೆ ಕುಳಿತು ಭಜನೆ ಮಾಡುವುದಕ್ಕಷ್ಟೇ ಬೇಕು’’ ಎಂದು ಟ್ವೀಟ್ ಮಾಡಿದ್ದಾರೆ. ಇದು ಆರೆಸ್ಸೆಸ್ ಮತ್ತು ಸಂಘ ಪರಿವಾರದ ಗರ್ಭಗುಡಿಗೆ ಬ್ರಾಹ್ಮಣೇತರರಿಗೆ ಪ್ರವೇಶ ನಿಷಿದ್ಧ ಎನ್ನುವುದನ್ನು ಮತ್ತೆ ಜಗತ್ತಿಗೆ ಸಾರಿ ಹೇಳಿದಂತಿದೆ.
ಲಿಂಗಾಯತರನ್ನೇ ಸಂಘ ಪರಿವಾರ ಮತ್ತು ಆರೆಸ್ಸೆಸ್ ಗರ್ಭಗುಡಿಯೊಳಗೆ ಬಿಟ್ಟುಕೊಳ್ಳದಿರುವಾಗ ಇನ್ನು ಒಕ್ಕಲಿಗರು, ಕುರುಬರು, ಬಿಲ್ಲವರು, ವಾಲ್ಮೀಕಿಗಳಿಗೆ ಗರ್ಭಗುಡಿ ಬಾಗಿಲು ತೆರೆಯುತ್ತದೆಯೇ ಎನ್ನುವ ಪ್ರಶ್ನೆಯನ್ನು ಈಗಾಗಲೇ ಈ ಸಮುದಾಯಗಳ ಮುಖಂಡರು ಬಹಿರಂಗವಾಗಿ ಪ್ರಶ್ನಿಸಲು ಶುರು ಮಾಡಿದ್ದಾರೆ.
ಇಲ್ಲಿ ಬಿ.ಎಲ್. ಸಂತೋಷ್ ಅವರ ಒಂದು ತಂತ್ರಗಾರಿಕೆ ಸ್ಪಷ್ಟವಾಗಿ ಕಾಣುತ್ತಿದೆ. ಎಲ್ಲೆಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಪಡೆ ಇದೆಯೋ ಅಲ್ಲಿ ಮಾತ್ರ ಮುಲಾಜಿಲ್ಲದೆ ಅಭ್ಯರ್ಥಿಗಳನ್ನು ಅವರ ಸೀನಿಯಾರಿಟಿ ನೋಡದೆ ಕಿತ್ತು ಹಾಕಿದ್ದಾರೆ. ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ಉಡುಪಿಯಲ್ಲಿ ರಘುಪತಿ ಭಟ್. ಇಲ್ಲೆಲ್ಲಾ ಸಂಘ ಪರಿವಾರದ ಅಡಿಪಾಯ ಇದೆ. ಎಲ್ಲೆಲ್ಲಿ ಸಂಘ ಪರಿವಾರಕ್ಕೆ ನೆಲೆ ಇಲ್ಲವೋ ಅಲ್ಲೆಲ್ಲಾ ಬಿಜೆಪಿ ನಾಯಕರ ಬದಲಿಗೆ ಅವರ ಪತ್ನಿ, ಮಗ, ಸೊಸೆ, ಸಹೋದರರಿಗೆ ಟಿಕೆಟ್ ನೀಡಿ ಎರಡು ಹೆಜ್ಜೆ ಹಿಂದಿಟ್ಟಿದ್ದಾರೆ.
ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ಧ್ವನಿಸಿದ ಮತ್ತೊಂದು ಸಂಗತಿ ಎಂದರೆ, ಶೆಟ್ಟರ್ ಅವರನ್ನೇ ಬಳಸಿಕೊಂಡು ಸಂಘ ಪರಿವಾರ ತನ್ನ ಬೇರುಗಳನ್ನು ವಿಸ್ತರಿಸಿಕೊಂಡಿತು. ಬಳಿಕ ಇದೇ ಶೆಟ್ಟರ್ ಅವರ ಕುತ್ತಿಗೆಗೆ ಅದೇ ಪರಿವಾರದ ಬೇರುಗಳನ್ನೇ ನೇಣಿನ ಕುಣಿಕೆಯಾಗಿ ಬಳಸಲಾಗಿದೆ. ಶಿವಮೊಗ್ಗದ ಕೆ.ಎಸ್.ಈಶ್ವರಪ್ಪಅವರ ವಿಚಾರದಲ್ಲೂ ಆಗಿರುವುದು ಇದೇ ಎನ್ನುವುದು ಇವರಿಬ್ಬರ ಬೆಂಬಲಿಗರ ಮಾತು, ನಡೆ, ನುಡಿಗಳಿಂದ ವ್ಯಕ್ತವಾಗಿದೆ.
ಲಿಂಗಾಯತರ ಬಳಿಕ ಬಿಜೆಪಿಯಲ್ಲಿರುವ ಒಕ್ಕಲಿಗ ನಾಯಕರು ತಮ್ಮ ಸರದಿಗಾಗಿ ಸಿದ್ಧವಾಗಬೇಕಿದೆ ಎನ್ನುವ ಸುಳಿವೂ ಬಿಜೆಪಿಯ ಟಿಕೆಟ್ ಹಂಚಿಕೆ ವೇಳೆ ಹೊರಗೆ ಬಿದ್ದಿದೆ. ಸದಾನಂದ ಗೌಡ, ಶೋಭಾ ಕರಂದ್ಲಾಜೆ ಬಳಿಕ ಈ ಬಾರಿ ಆರ್. ಅಶೋಕ್ಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ. ಆರ್. ಅಶೋಕ್ ಅವರನ್ನು ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಕಣಕ್ಕಿಳಿಸಿರುವುದು ಬಿಜೆಪಿಯೊಳಗೆ ಡಾ.ಸುಧಾಕರ್ ಮತ್ತು ಡಾ.ಅಶ್ವತ್ಥ ನಾರಾಯಣ್ ಇಬ್ಬರನ್ನು ಮುಂದಿಟ್ಟುಕೊಂಡು ಉಳಿದ ಒಕ್ಕಲಿಗ ನಾಯಕರನ್ನು ಅಳಿಸುವ ಮುನ್ಸೂಚನೆ ಎನ್ನುವ ಮಾತುಗಳು ಪದ್ಮನಾಭ ನಗರದಲ್ಲಿ ಕೇಳಿಸುತ್ತಿವೆ.
ಜಗದೀಶ್ ಶೆಟ್ಟರ್ ಅವರ ಪತ್ರಿಕಾಗೋಷ್ಠಿಯ ಬಳಿಕ ಬಿ.ಎಲ್. ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ಲಿಂಗಾಯತ ಸಮುದಾಯದ ಕಟಕಟೆಯಲ್ಲಿ ಕೈ ಕಟ್ಟಿ ನಿಲ್ಲುವಂತಾಗಿದೆ. ಕಳೆದ ತಿಂಗಳು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಹ್ಲಾದ್ ಜೋಶಿಯವರನ್ನು ಗುರಿ ಮಾಡಿ ನೀಡಿದ್ದ ಡಿಎನ್ಎ ಹೇಳಿಕೆಗೆ ಶೆಟ್ಟರ್ ಅವರ ಪತ್ರಿಕಾಗೋಷ್ಠಿ ಸಮರ್ಥನೆ ಮತ್ತು ಪುರಾವೆಗಳನ್ನು ಒದಗಿಸಿಕೊಟ್ಟಿದೆ.
ಲಿಂಗಾಯತ ಸಮುದಾಯದ ಕಟಕಟೆಯಲ್ಲಿ ನಿಂತಿರುವ ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿ ಇಬ್ಬರೂ ಬಿ.ಎಸ್.ಯಡಿಯೂರಪ್ಪಮತ್ತು ಬಸವರಾಜ ಬೊಮ್ಮಾಯಿ ಕಡೆಗೆ ನೋಡುತ್ತಿದ್ದಾರೆ. ಆದರೆ ಸಂದರ್ಭ ಹೇಗಿದೆ ಎಂದರೆ ಬಿಎಸ್ವೈ ಮತ್ತು ಬೊಮ್ಮಾಯಿ ಇಬ್ಬರೂ ‘‘ಆನು ದೇವ ಹೊರಗಣವನು’’ ಎನ್ನುವಂತಾಗಿದೆ.







