ಬೆಳ್ತಂಗಡಿ: ಜೆಡಿಎಸ್ ನಿಂದ ಪತ್ರಕರ್ತ ಅಶ್ರಫ್ ಆಲಿಕುಂಞಿ ಕಣಕ್ಕೆ

ಬೆಳ್ತಂಗಡಿ, ಎ.20: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ತಾಲೂಕಿನ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಣಕ್ಕಿಳಿಯಲಿದ್ದಾರೆ.
ಅಶ್ರಫ್ ಆಲಿಕುಂಞಿಯವರಿಗೆ ಇಂದು ಪಕ್ಷದ ಹಿರಿಯರ ಸಮ್ಮುಖದಲ್ಲಿ 'ಬಿ ಫಾರಂ' ಹಸ್ತಾಂತರಿಸಲಾಗಿದೆ.
ಅಶ್ರಫ್ ಆಲಿಕುಂಞಿ ಮುಂಡಾಜೆ 1998ರಿಂದ ಜೈ ಕನ್ನಡಮ್ಮ ವಾರಪತ್ರಿಕೆ, ಕರಾವಳಿ ಅಲೆ ದೈನಿಕ, ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ವರದಿಗಾರರಾಗಿ, ಪ್ರಸಕ್ತ ಜಯಕಿರಣ ಕನ್ನಡ ಬೆಳಗ್ಗಿನ ದೈನಿಕ ಪತ್ರಿಕೆಯಲ್ಲಿ ಹವ್ಯಾಸಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಂಡಾಜೆ ಗ್ರಾಮದ ದಿ. ಆಲಿಕುಂಞಿ ಮತ್ತು ಕೆ ನೆಫೀಸಾ ದಂಪತಿಯ ಪುತ್ರರಾಗಿ ಜನಿಸಿದ ಅವರು ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು. ಪ್ರೌಢ ಶಾಲೆವರೆಗಿನ ಶಿಕ್ಷಣವನ್ನು ಮುಂಡಾಜೆಯಲ್ಲಿ, ಬಳಿಕ ವೃತ್ತಿಗೆ ಸಂಬಂಧಿಸಿದ ಅಗತ್ಯ ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡಿದ್ದಾರೆ. ಕಳೆದ 23 ವರ್ಷಗಳಿಂದ ಗ್ರಾಮೀಣ ಪತ್ರಕರ್ತರಾಗಿ, ಅಭಿವೃದ್ಧಿಪರ ಮತ್ತು ಮಾನವೀಯ ಪತ್ರಿಕೋಧ್ಯಮದ ಮೂಲಕ ಗಮನಸೆಳೆದಿದ್ದಾರೆ.
"ಓರ್ವ ಸಾಮಾನ್ಯ ಪತ್ರಕರ್ತನಾಗಿ ತಾಲೂಕಿನ ಮೂಲೆ ಮೂಲೆಗೆ ಓಡಾಡಿದ್ದೇನೆ. ಎಲ್ಲ ಜಾತಿ-ಜನಾಂಗವನ್ನು ಸಮಾನವಾಗಿ ಕಂಡು ನಡೆದುಕೊಂಡಿದ್ದೇನೆ. ಆ ಮೂಲಕ ಎಲ್ಲರ ಒಲವು ಅಭಿಮಾನ ಗಳಿಸಿದ್ದೇನೆ. ತಾಲೂಕಿನ ನೈಜ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣವಿದೆ. ತಾಲೂಕಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಅಗಲಿದವರ ಆದರ್ಶ, ಈಗ ಇರುವ ಎಲ್ಲಾ ಹಿರಿಯ ಕಿರಿಯ ನಾಯಕರ ಮಾರ್ಗದರ್ಶನದಲ್ಲಿ ಮುಂದುವರಿಯಲಿದ್ದೇನೆ" ಎಂದು ಅಶ್ರಫ್ ಆಲಿಕುಂಞಿ ಹೇಳಿದ್ದಾರೆ.