ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಹಾಗಿಲ್ಲ: ಉ.ಪ್ರ. ಸರ್ಕಾರ ಆದೇಶ

ಲಕ್ನೋ: ಮುಂಬರುವ ಈದ್ ಮತ್ತು ಅಕ್ಷಯ ತೃತೀಯ ಹಬ್ಬಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ (Uttar Pradesh) ಸರ್ಕಾರ ಇಂದು ಆದೇಶ ಹೊರಡಿಸಿ ರಸ್ತೆಗಳಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವ ಹಾಗಿಲ್ಲ ಎಂದು ಹೇಳಿದೆ.
ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್, ಡಿಜಿಪಿ ಆರ್ ಕೆ ವಿಶ್ವಕರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿ ನಂತರ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಧಾರ್ಮಿಕ ಸ್ಥಳಗಳ ಭದ್ರತೆಗೆ ಸೂಕ್ತ ಏರ್ಪಾಟುಗಳನ್ನು ಮಾಡಬೇಕು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು ಎಂಡು ಡಿಜಿಪಿ ಹೇಳಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಾರ್ಥನೆಗಳು ನಿರ್ದಿಷ್ಟ ಸ್ಥಳಗಳಲ್ಲಿಯೇ ನಡೆಯಬೇಕು ಹಾಗೂ ಯಾವುದೇ ಕಾರ್ಯಕ್ರಮವನ್ನು ರಸ್ತೆಗೆ ಅಡ್ಡಿಯಾಗುವಂತೆ ಅಥವಾ ವಾಹನ ಸಂಚಾರಕ್ಕೆ ತೊಡಕುಂಟಾಗುವಂತೆ ನಡೆಸಬಾರದು," ಎಂದು ಹೇಳಿಕೆ ತಿಳಿಸಿದೆ.
ಯಾವುದೇ ಧಾರ್ಮಿಕ ಮೆರವಣಿಗೆಯನ್ನು ಅನುಮತಿಯಿಲ್ಲದೆ ನಡೆಸುವ ಹಾಗಿಲ್ಲ, ಸಾಂಪ್ರದಾಯಿಕ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರ ಅನುಮತಿಸಬೇಕು, ಅನಗತ್ಯ ಅನುಮತಿಗಳನ್ನು ನೀಡಬಾರದು ಎಂದು ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹರಡದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ.
"ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ, ರಮಝಾನ್ ಮಾಸ ನಡೆಯುತ್ತಿದೆ. ಈದ್-ಉಲ್-ಫಿತ್ರ್, ಅಕ್ಷಯ ತೃತೀಯ ಮತ್ತು ಪರಶುರಾಮ್ ಜಯಂತಿ ಒಂದೇ ದಿನ, ಎಪ್ರಿಲ್ 22 ರಂದು ನಡೆಯುವ ಸಾಧ್ಯತೆಯಿದೆ," ಎಂದು ಡಿಜಿಪಿ ಹೇಳಿದ್ದಾರಲ್ಲದೆ, ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.