ರಸ್ತೆ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿರುವ ಪುತ್ರಿಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಆತ್ಮಹತ್ಯೆಗೈದ ತಂದೆ
ನನ್ನ ಚಿಕಿತ್ಸೆಗಾಗಿ ತಂದೆ ತಮ್ಮ ರಕ್ತ ಕೂಡ ಮಾರಾಟ ಮಾಡುತ್ತಿದ್ದರು ಎಂದ ಪುತ್ರಿ

ಭೋಪಾಲ್: ಐದು ವರ್ಷಗಳ ಹಿಂದೆ ನಡೆದ ಅಪಘಾತದ ನಂತರ ನಡೆದಾಡಲು ಅಸಮರ್ಥಳಾಗಿದ್ದ ಪುತ್ರಿಯ ಚಿಕಿತ್ಸೆಗೆ ಹಾಗೂ ಕುಟುಂಬವನ್ನು ನಡೆಸಿಕೊಂಡು ಹೋಗಲು ಹಣಕಾಸಿನ ಅಡಚಣೆಯಿಂದ ತೀವ್ರ ನೊಂದು ಮಧ್ಯ ಪ್ರದೇಶದ ಸತ್ನಾ ಎಂಬಲ್ಲಿನ ನಿವಾಸಿ ಪ್ರಮೋದ್ ಎಂಬ ವ್ಯಕ್ತಿ ಆತ್ಮಹತ್ಯೆಗೈದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತಂದೆ ತನ್ನ ಚಿಕಿತ್ಸೆಗೆ ಹಣ ಹೊಂದಿಸಲು ತನ್ನ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದರು, ಹಾಗೂ ಕೆಲವೊಮ್ಮೆ ವೆಚ್ಚಗಳನ್ನು ನಿಭಾಯಿಸಲು ರಕ್ತದಾನ ಕೂಡ ಮಾಡುತ್ತಿದ್ದರು ಎಂದು ಪ್ರಮೋದ್ ಪುತ್ರಿ ಅನುಷ್ಕಾ ಗುಪ್ತಾ ಹೇಳುತ್ತಾಳೆ. ಅಪಘಾತದಲ್ಲಿ ಬೆನ್ನು ಹುರಿಗೆ ಬಿದ್ದ ಪೆಟ್ಟಿನಿಂದ ಆಕೆ ನಡೆದಾಡಳು ಅಸಮರ್ಥಳಾಗಿದ್ದಾಳೆ.
ತನ್ನ ರಕ್ತ ಮಾರಾಟ ಮಾಡಿ ಅಸೌಖ್ಯಕ್ಕೀಡಾದ ತಂದೆ ಕೊನೆಗೆ ಹಣ ಸಂಪಾದಿಸುವ ದಾರಿ ಕಾಣದೆ ಕಂಗಾಲಾಗಿದ್ದರು ಎಂದು ಆಕೆ ಹೇಳುತ್ತಾಳೆ.
ಹದಿನೇಳು ವರ್ಷದ ಅನುಷ್ಕಾ ಕಲಿಕೆಯಲ್ಲಿ ಪ್ರತಿಭಾವಂತೆಯಾಗಿದ್ದು ಬೋರ್ಡ್ ಪರೀಕ್ಷೆಯನ್ನು ಮಲಗಿಕೊಂಡೇ ಸಹಾಯಕರೊಬ್ಬರ ಸಹಾಯದಿಂದ ಬರೆದಿದ್ದರು.
ತಮಗೆ ಸರಕಾರದಿಂದ ಯಾವುದೇ ಸಹಾಯ ದೊರಕಿಲ್ಲ. ಚಿಕಿತ್ಸೆಗೆ ಹಣ ಹೊಂದಿಸಲಾಗದೆ ತಂದೆ ಖಿನ್ನರಾಗಿದ್ದರು ಎಂದು ಆಕೆ ಹೇಳುತ್ತಾಳೆ.
ಸೋಮವಾರ ಸಂಜೆ 4 ಗಂಟೆಯಿಂದ ಪ್ರಮೋದ್ ನಾಪತ್ತೆಯಾದಾಗ ಅವರಿಗಾಗಿ ಹುಡುಕಾಡಿ ಕೊನೆಗೆ ಕುಟುಂಬ ಪೊಲೀಸ್ ದೂರು ನೀಡಿತ್ತು. ಅವರ ಮೃತದೇಹ ಮರುದಿನ ಸತ್ನಾದ ರೈಲ್ವೆ ಹಳಿ ಮೇಲೆ ಪತ್ತೆಯಾಗಿತ್ತು.







