ಜಮ್ಮು ಕಾಶ್ಮೀರ: ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮ

ಶ್ರೀನಗರ್: ಜಮ್ಮು ಕಾಶ್ಮೀರದ ಪೂಂಚ್ ಎಂಬಲ್ಲಿ ಗುರುವಾರ ಸೇನಾ ಟ್ರಕ್ ಮೇಲೆ ಭಯೋತ್ಪಾದಕರು ಗ್ರೆನೇಡ್‌ನಂತಹ ವಸ್ತು ಬಳಸಿ ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಈ ಮೊದಲು ಇದೊಂದು ಅಗ್ನಿ ಅವಘಡ ಎಂದು ವರದಿಯಾಗಿತ್ತು. ಇದೀಗ, ಇದೊಂದು ಭಯೋತ್ಪಾದಕ ದಾಳಿ ಎಂದು ದೃಢಪಟ್ಟಿದೆ.
ಅಪರಿಚಿತ ಭಯೋತ್ಪಾದಕರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದು ಹವಾಮಾನ ವೈಪರೀತ್ಯದ ಅವಕಾಶವನ್ನು ಭಯೋತ್ಪಾದಕರು ಬಳಸಿಕೊಂಡರು ಎಂದು ಸೇನಾ ಪ್ರಧಾನ ಕಚೇರಿ, ನಾರ್ದರ್ನ್ ಕಮಾಂಡ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
"ಭಯೋತ್ಪಾದಕರು ಗ್ರೆನೇಡ್‌ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡಿತ್ತು" ಎಂದು ಅದು ತಿಳಿಸಿದೆ.
ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಐವರು ಸಿಬ್ಬಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಯೋಧನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಕೋರರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.







