ಕಾಂಗ್ರೆಸ್ ಅಂದರೆ ತುಷ್ಠಿಕರಣ, ಬಿಜೆಪಿ ಅಂದರೆ ಸರ್ವವ್ಯಾಪಿ: ಸುನೀಲ್ ಕುಮಾರ್

ಉಡುಪಿ: ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತುಷ್ಠಿಕರಣ ರಾಜಕಾರಣ ಮಾಡುತ್ತ ಬಂದಿದೆ. ಒಂದು ಸಮುದಾಯವನ್ನು ಓಲೈಕೆ ಮತ್ತು ಇನ್ನೊಂದು ಸಮುದಾಯವನ್ನು ಅವಹೇಳನ ಮಾಡುವ ಪರಂಪರೆಯನ್ನು ಕಾಂಗ್ರೆಸ್ ಮಾಡುತ್ತಿತ್ತು. ಹಾಗಾಗಿ ಕಾಂಗ್ರೆಸ್ ಅಂದರೆ ತುಷ್ಠಿಕರಣ, ಬಿಜೆಪಿ ಅಂದರೆ ಸರ್ವವ್ಯಾಪಿ ಆಡಳಿತ ವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ನಾಮಪತ್ರ ಸಲ್ಲಿಕೆಗೆ ಮೊದಲು ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿ ಸಮೀಪ ಇಂದು ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಬಿಜೆಪಿ ಎಲ್ಲ ಸಮುದಾಯಗಳಿಗೆ ಹಲವು ರೀತಿಯ ಯೋಜನೆ ನೀಡುವ ಮೂಲಕ ಸರ್ವವ್ಯಾಪ್ತಿಯ ಆಡಳಿತವನ್ನು ನೀಡಿದೆ. ಆದುದರಿಂದ ತುಷ್ಠಿಕರಣದ ಕಾಂಗ್ರೆಸ್ ಆಡಳಿತ ಬೇಕೆ ಅಥವಾ ಸರ್ವವ್ಯಾಪ್ತಿ ಅಭಿವೃದ್ಧಿಯ ಬಿಜೆಪಿ ಆಡಳಿತ ಬೇಕೆ ಎಂಬುದನ್ನು ಕರಾವಳಿ ಜನ ತೀರ್ಮಾನ ಮಾಡಬೇಕು. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ಮೂಲಕ ಡಬಲ್ ಇಂಜಿನ್ ಸರಕಾರಕ್ಕೆ ದೊಡ್ಡ ಕೊಡುಗೆಯನ್ನು ನೀಡಬೇಕು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಾನು ಕಾಂಗ್ರೆಸ್ ಬಿಟ್ಟರೂ ಪಕ್ಷಕ್ಕೆ ಯಾವುದೇ ಪರಿಣಾಮ ಬೀರಲ್ಲ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಹೇಳಿದ್ದರು. ಇದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿ ತೋರಿಸುವ ಮೂಲಕ ಇದಕ್ಕೆಲ್ಲ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ, ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಬಿಜೆಪಿ ಕಾಪು ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಅಭ್ಯರ್ಥಿ ಕಿರಣ್ ಕೊಡ್ಗಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದೆಹಲಿ ಶಾಸಕ ವಿಜಯೇಂದ್ರ ಗುಪ್ತ, ಮುಖಂಡರಾದ ನಯನ ಗಣೇಶ್, ಗಣೇಶ್ ಹೊಸಬೆಟ್ಟು, ಸುರೇಶ್, ದಿನಕರ ಬಾಬು, ರಾಘವೇಂದ್ರ ಕಿಣಿ, ವೀಣಾ ನಾಯ್ಕ್, ಸುಧಾಕರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಸುಮಿತ್ರಾ ಆರ್.ನಾಯಕ್, ಮನೋಹರ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ನಗರ ಸಭಾ ಸದಸ್ಯ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.







