ಶ್ರೀಲಂಕಾದಿಂದ 1 ಲಕ್ಷ ಕೋತಿಗಳಿಗೆ ಬೇಡಿಕೆ ಸಲ್ಲಿಸಿದ ಚೀನಾ!

ಕೊಲಂಬೋ: ಶ್ರೀಲಂಕಾದಿಂದ ಅಳಿವಿನಂಚಿನಲ್ಲಿರುವ 1 ಲಕ್ಷ ಟೋಕೆ ಮಕಾಖ್ ಕೋತಿಗಳನ್ನು ಆಮದು ಮಾಡಲು ಚೀನಾದಿಂದ ವಿನಂತಿಯೊಂದು ಬಂದಿದೆ ಎಂಬುದನ್ನು ಶ್ರೀಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ದೃಢೀಕರಿಸಿದ್ದಾರೆ. ಆದರೆ ಈ ಪ್ರಸ್ತಾವನೆಯು ದೇಶದ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಝೂಲಾಜಿಕಲ್ ಗಾರ್ಡನ್ಸ್ ಜೊತೆಗೆ ನಂಟು ಹೊಂದಿರುವ ಖಾಸಗಿ ಚೀನೀ ಕಂಪೆನಿ ಈ ವಿನಂತಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
"ಅವರು ಕೋರಿದ ಒಂದು ಲಕ್ಷ ಕೋತಿಗಳನ್ನು ಒಮ್ಮೆಗೆ ಕಳುಹಿಸಲಾಗುವುದಿಲ್ಲ, ಆದರೆ ದೇಶದಲ್ಲಿ ಕೋತಿಗಳು ಉಂಟುಮಾಡುತ್ತಿರುವ ಬೆಳೆ ನಷ್ಟವನ್ನು ಪರಿಗಣಿಸಲಾಗುವುದು. ಸಂರಕ್ಷಿತ ಪ್ರದೇಶಗಳ ಕೋತಿಗಳನ್ನು ಕಳುಹಿಸಲಾಗುವುದಿಲ್ಲ, ಕೃಷಿ ಪ್ರದೇಶಗಳಲ್ಲಿರುವ ಕೋತಿಗಳನ್ನು ಕಳುಹಿಸುವ ಬಗ್ಗೆ ಯೋಚಿಸಲಾಗುವುದು," ಎಂದು ಅವರು ಹೇಳಿದ್ದಾರೆ.
ಈ ನಿರ್ದಿಷ್ಟ ಜಾತಿಯ ಕೋತಿಗಳು ಶ್ರೀಲಂಕಾದಲ್ಲಿ ಮಾತ್ರ ಇದ್ದು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಕೆಂಪು ಪಟ್ಟಿಯಲ್ಲಿ ಈ ಜಾತಿಯ ಕೋತಿಗಳಿವೆ.
ಚೀನಾದ ಮೃಗಾಲಯದಲ್ಲಿ ಪ್ರದರ್ಶಿಸಲು ಕೋತಿಗಳನ್ನು ಕಳುಹಿಸಿಕೊಡಲು ಬಂದಿರುವ ಬೇಡಿಕೆಯ ಕುರಿತು ಕಳೆದ ವಾರ ಶ್ರೀಲಂಕಾದ ಕೃಷಿ ಸಚಿವ ಮಹಿಂದ ಅಮರವೀರ ಕೂಡ ಹೇಳಿದ್ದರು.
ಅಲ್ಲಿನ 1000ಕ್ಕೂ ಅಧಿಕ ಮೃಗಾಲಯಗಳಿಗಾಗಿ ಈ ಬೇಡಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾದ ಕಾನೂನುಗಳು ಜೀವಂತ ಪ್ರಾಣಿಗಳ ರಫ್ತಿಗೆ ನಿಷೇಧ ಹೇರಿವೆ. ಈ ವರ್ಷ ಶ್ರೀಲಂಕಾದಲ್ಲಿರುವ ಮೂರು ಜಾತಿಯ ಕೋತಿಗಳು, ನವಿಲುಗಳು, ಕಾಡು ಹಂದಿಗಳನ್ನು ತನ್ನ ಸಂರಕ್ಷಿತ ಪಟ್ಟಿಯಿಂದ ತೆಗೆದುಹಾಕಿದ್ದು ಕೃಷಿನಾಶಗೈಯ್ಯುವವುಗಳನ್ನು ಕೊಲ್ಲಲು ಅನುಮತಿಸಿದೆ.
ಚೀನಾ ಬೇಡಿಕೆಯಿರಿಸಿರುವ ಜಾತಿಯ ಕೋತಿಗಳು ಶ್ರೀಲಂಕಾದಲ್ಲಿ ಹಲವೆಡೆ ಬೆಳೆಹಾನಿ ನಡೆಸುತ್ತಿದ್ದು ಜನರ ಮೇಲೂ ದಾಳಿ ನಡೆಸುತ್ತವೆ.
ಚೀನಾದ ಖಾಸಗಿ ಕಂಪೆನಿಗೆ ʻಪ್ರಾಯೋಗಿಕ ಉದ್ಧೇಶಗಳಿಗೆʼ ಕೋತಿಗಳ ಬೇಡಿಕೆ ಇರಿಸಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಕೊಲಂಬೋದಲ್ಲಿರುವ ಚೀನಾ ದೂತಾವಾಸ ಹೇಳಿದೆ.