ಕುತಂತ್ರದ ಮಾಹಿತಿ ಹಿನ್ನೆಲೆಯಲ್ಲಿ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದೇನೆ: ಡಿ.ಕೆ. ಸುರೇಶ್
''ಡಿಕೆಶಿ ನಾಮಪತ್ರ ತಿರಸ್ಕೃತ ಆಗಲೂ ಬಹುದು...''

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಸರಕಾರ ಕುತಂತ್ರ ನಡೆಸಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾನೂ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ’ ಎಂದು ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸಹೋದರ ಡಿ.ಕೆ.ಶಿವಕುಮಾರ್ ಅವರ ನಾಮಪತ್ರ ಕ್ರಮಬದ್ಧವಾಗಿದೆ. ಆದರೆ, ಕುತಂತ್ರ ನಡೆಸಿ ಅವರ ನಾಮಪತ್ರ ತಿರಸ್ಕೃತ ಆಗಲೂ ಬಹುದು. ಆ ಮಾಹಿತಿ ಇರುವ ಕಾರಣ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಚುನಾವಣಾ ಆಯೋಗದ ಅಧಿಕಾರಿಗಳೂ ಸರಕಾರಿ ಅಧಿಕಾರಿಗಳೇ ಆಗಿದ್ದಾರೆ. ಅವರು ಸರಕಾರದ ಸೂಚನೆಯಂತೆ ಏನು ಬೇಕಾದರೂ ಮಾಡಬಹುದು. ಹೀಗಾಗಿ ನಾವೂ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇವೆ’ ಎಂದು ಡಿ.ಕೆ.ಸುರೇಶ್ ತಿಳಿಸಿದರು.
‘ಎ.17ರಂದು ಡಿ.ಕೆ.ಶಿವಕುಮಾರ್ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದೀಗ ನಾನು ನಾಮಪತ್ರ ಸಲ್ಲಿಕೆ ಮಾಡಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ’ ಎಂದು ಹೇಳಿದ ಡಿ.ಕೆ.ಸುರೇಶ್, ‘ಪದ್ಮನಾಭನಗರ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.
‘ನಾಲ್ಕೈದು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರಿಗೆ ಖುದ್ದು ಹಾಜರಿಗೆ ನೋಟಿಸ್ ನೀಡಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂಬ ಮಾಹಿತಿ ನೀಡಿದ್ದೇವೆ. ಆದರೂ, ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಡಿ.ಕೆ.ಸುರೇಶ್ ತಿಳಿಸಿದರು.
‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಏನು ಬೇಕಾದರೂ ಮಾಡಬಹುದು. ಹೀಗಾಗಿ ಪ್ರಜಾಪ್ರಭುತ್ವ ಉಳಿಸಬೇಕಿರುವುದು ನಮ್ಮ ಜವಾಬ್ದಾರಿ. ಬಿಜೆಪಿ ಕುತಂತ್ರದ ಮಾಹಿತಿ ಆಧರಿಸಿಯೇ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕನಕಪುರ ಜನತೆ ಮನ ಗೆಲ್ಲಲ್ಲು ಸಾಧ್ಯವಿಲ್ಲದ ಬಿಜೆಪಿ ಕುತಂತ್ರದ ರಾಜಕಾರಣಕ್ಕೆ ಮುಂದಾಗಿದೆ’ ಎಂದು ಸುರೇಶ್ ದೂರಿದರು.







