ಉಡುಪಿ: ಕೊನೆಯ ದಿನ 21 ಮಂದಿಯಿಂದ 35 ನಾಮಪತ್ರಗಳ ಸಲ್ಲಿಕೆ

ಉಡುಪಿ, ಎ.21: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಗುರುವಾರ ಒಟ್ಟು 21 ಮಂದಿ ಅಭ್ಯರ್ಥಿಗಳು 35 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುರುರಾಜ ಶೆಟ್ಟಿ ಗಂಟಿಹೊಳೆ, ಕಾಂಗ್ರೆಸ್ ಪಕ್ಷದ ಕೆ.ಗೋಪಾಲ ಪೂಜಾರಿ, ಆಮ್ ಆದ್ಮಿ ಪಕ್ಷದ ರಮಾನಂದ ಪ್ರಭು, ರಾಷ್ಟ್ರೀಯ ಸಮಾಜ ದಳ (ಆರ್) ಪಕ್ಷದಿಂದ ಮಂಜುನಾಥ ಕೆ. ಪಕ್ಷೇತರರಾಗಿ ಶ್ಯಾಮಾ ಬಿ., ಎಚ್.ಸುರೇಶ್ ಪೂಜಾರಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳದಿಂದ ರಮೇಶ್, ಆಮ್ ಆದ್ಮಿ ಪಕ್ಷದಿಂದ ಚಂದ್ರ ಹರಿಜನ, ಪಕ್ಷೇತರ ಅಭ್ಯರ್ಥಿಯಾಗಿ ಜಯರಾಜ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಯಶಪಾಲ್ ಸುವರ್ಣ, ಆಮ್ ಆದ್ಮಿ ಪಕ್ಷದಿಂದ ಪ್ರಭಾಕರ ರಾಮ ಸಾಲ್ಯಾನ್ ಹಾಗೂ ದೀನಾ ಪ್ರಭಾಕರ ಸಾಲ್ಯಾನ್ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿನಯಕುಮಾರ್ ಸೊರಕೆ, ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಹಮ್ಮದ್ ಹನೀಫ್, ಆಮ್ ಆದ್ಮಿ ಪಕ್ಷದ ಸ್ಟೀಫನ್ ರಿಚರ್ಡ್ ಲೋಬೊ, ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ರೆಹಮಾನ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಕರ್ನಾಟಕದ ಉದಯಕುಮಾರ್ ಎಂ, ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣ ಶೆಟ್ಟಿ, ಪ್ರಮೋದ್ ಮುತಾಲಿಕ್, ಕೆ.ಹರೀಶ್ ಅಧಿಕಾರಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಲಿದೆ. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಎ.24 ಕೊನೆಯ ದಿನವಾಗಿರುತ್ತದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಮತಗಳ ಎಣಿಕೆ ನಡೆಯಲಿದೆ.









