ಮುಕ್ತ, ಪಾರದರ್ಶಕ ಚುನಾವಣೆ ನಡೆಸಿ: ತುಕಾರಾಂ ಹರಿಬಾಹು ಮುಂಡೆ

ಉಡುಪಿ, ಎ.20: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ, ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ನೀಡುವ ಎಲ್ಲಾ ನಿರ್ದೇಶನಗಳನ್ನು ಪಾಲಿಸುವುದರ ಮೂಲಕ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕ ತುಕಾರಾಂ ಹರಿಬಾಹು ಮುಂಡೆ ಹೇಳಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಚುನಾವಣಾ ಪೂರ್ವ ಸಿದ್ದತೆಗಳಿಗೆ ಸಂಬಂಧಿಸಿದಂತೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಚುನಾವಣಾ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಲೋಪಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು ಮತಗಟ್ಟೆಗಳಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮತ್ತು ಮತದಾರರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಸೂಚನೆಗಳನ್ನು ನೀಡಿದರು.
ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಮತ್ತು ಕೋವಿಡ್ ಪೀಡಿತರಿಗೆ ಮನೆಯಿಂದಲೇ ಮತದಾನ ಮಾಡಲು ನೀಡಿರುವ ಅವಕಾಶವನ್ನು ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸುವಂತೆ ತಿಳಿಸಿದರು.
ಮತದಾನ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡುವ ಸಮಯದಲ್ಲಿ ಮತದಾನ ದಿನದಂದು ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ವಿವರವಾಗಿ ಮಾಹಿತಿಗಳನ್ನು ನೀಡಬೇಕು. ಹಾಗೂ ಮತಯಂತ್ರಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ತರಬೇತಿ ನೀಡುವಂತೆ ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳು ಅಂಚೆ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಅವರು ಸೂಚಿಸಿದರು.
ಕಾರ್ಕಳ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಆಂದ್ರ ವಂಶಿ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನ ವಾಗುವಂತೆ, ಸ್ವೀಪ್ ವತಿಯಿಂದ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದರು. ಇದಕ್ಕಾಗಿ ವಿವಿಧ ರಾಜಕೀಯ ಪಕ್ಷದ ಏಜೆಂಟ್‌ಗಳೊಂದಿಗೆ ಸಭೆಯನ್ನು ಮುಂದಿನ ದಿನಗಳಲ್ಲಿ ನಡೆಸಿ ಅವರುಗಳ ಅಹವಾಲುಗಳನ್ನು ಪರಿಶೀಲಿಸಲಾಗುವುದು ಎಂದರು.
ವೆಚ್ಚ ವೀಕ್ಷಕ ಅಂಕಿತ್ ಸೋಮನಿ ಮಾತನಾಡಿ, ಜಿಲ್ಲೆಯ ಬ್ಯಾಂಕ್ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇಡುವಂತೆ ಲೀಡ್ ಬ್ಯಾಂಕ್ ಕೆನರಾ ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ವೀಕ್ಷಕಿ ಬಿನಿತಾ ಠಾಕೂರ್, ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆಯಿಂದ ನಿಯೋಜಿಸಿರುವ ಸಿಬ್ಬಂದಿಗಳ ಮಾಹಿತಿ ಮತ್ತು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲೆಯಲ್ಲಿ ಇದುವರೆಗೆ ಕೈಗೊಂಡಿರುವ ಚುನಾವಣಾ ಪೂರ್ವ ಸಿದ್ದತೆಗಳ ಬಗ್ಗೆ ವಿವರಗಳನ್ನು ನೀಡಿದರು.
ಸಭೆಯಲ್ಲಿ ಕಾರ್ಕಳ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಆಂಧ್ರ ವಂಶಿ, ವೆಚ್ಚ ವೀಕ್ಷಕ ಗೋರ್ಸೆ ಪ್ರಸಾದ್ ದತ್ತಾತ್ರೇಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ವಿವಿಧ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.