ಹಾಸನದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜೆಡಿಎಸ್: ಬಿಜೆಪಿ ಸೋಲಿಸಿ, ಸ್ವರೂಪ್ ಗೆಲ್ಲಿಸುವಂತೆ ದೇವೇಗೌಡ ಕರೆ

ಹಾಸನ : ಎ,20: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಅವರನ್ನ ಗೆಲ್ಲಿಸುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಗರದಲ್ಲಿ ತೆರೆದ ವಾಹನದಲ್ಲಿ ಹೊರಟ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, 'ಪ್ರೀತಂ ಜೆ.ಗೌಡ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿದ್ದಾನೆ. ಇಡೀ ನಮ್ಮ ಕುಟುಂಬದ ಸವಾಲು ಎಂದರೆ ಸ್ವರೂಪ್ ರವರನ್ನು ಗೆಲ್ಲಿಸುವುದು. ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡನನ್ನು ಸೋಲಿಸಲೆಬೇಕು' ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಹಾಸನ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಶಾಸಕ ಪ್ರೀತಂ ಜೆ. ಗೌಡ ಕಳೆದ 3-4 ವರ್ಷಗಳಿಂದ ಮಾಡಿರುವು ಕೆಲಸಕ್ಕೆ ಹಲವಾರು ಕುಟುಂಬಗಳು ನೊಂದಿವೆ. 3 ವರ್ಷಗಳಲ್ಲಿ ಆಕ್ರಮ ಹಣ ಲೂಟಿ ಮಾಡಿದ್ದಾರೆ. ಮಹಿಳೆಯರಿಗೆ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಟೋಪಿ ಹಾಕಿದ್ದಾರೆ. ಮಾಜಿ ಪ್ರಧಾನಿ ಹಾಗೂ ನಾನು ಮುಖ್ಯಮಂತ್ರಿಯಾಗಿದ್ದಾಗ ರೇವಣ್ಣನವರು 1 ನಿಮಿಷ ಸಮಯ ವ್ಯರ್ಥ ಮಾಡದೆ ಹಾಸನ ಜಿಲ್ಲೆಯ ಅಭಿವೃದ್ಧಿ ಮಾಡಿದ್ದರು. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಂತಿಮವಾಗಿ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿದ್ದೆವೆ ಎಂದರು.
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ರೇವಣ್ಣ ಮತ್ತು ಕುಮಾರಸ್ವಾಮಿ ನನ್ನ ತಂದೆ ನಿಧನದ ನಂತರ ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಭವಾನಿ ರೇವಣ್ಣನವರು ತಾಯಿ ಸ್ಥಾನದಲ್ಲಿ ನಿಂತು, ಕುಮಾರಸ್ವಾಮಿಯವರಿಗೆ ಕರೆ ಮಾಡಿ ಟಿಕೆಟ್ ಕೊಡಿಸಿದರು. ಹಾಸನ ಶಾಸಕರು ರಸ್ತೆ ಮಾಡಿದ್ದಾರೆ ರೇವಣ್ಣನವರು ಅದರ ಹತ್ತು ಪಟ್ಟು ಹೆಚ್ಚು ಕೆಲಸ ಮಾಡಿದ್ದಾರೆ. ನಮ್ಮ ತಂದೆ 4 ಬಾರಿ ಶಾಸಕರಾದರು. ಆದರೆ ಒಂದು ಬಾರಿ ಈ ರೀತಿ ನಡೆದುಕೊಳ್ಳಲಿಲ್ಲ. ನಮ್ಮ ಮನೆಯ ಆಸ್ತಿ ಹಾಗೂ ದುರಂಹಕಾರಿ ಶಾಸಕನ ಆಸ್ತಿ ಪರಿಶೀಲನೆ ಮಾಡಿ ಸತ್ಯ ತಿಳಿಯುತ್ತದೆ ಎಂದು ಸವಾಲು ಹಾಕಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಎ.ಮಂಜು ಉಪಸ್ಥಿತರಿದ್ದರು.







