ಬಿಜೆಪಿಯಿಂದ ರೈತರ ಹಿತ: ದ.ಕ. ಜಿಲ್ಲಾ ರೈತ ಮೋರ್ಚಾ

ಮಂಗಳೂರು : ಬಿಜೆಪಿಯ ಡಬಲ್ ಇಂಜಿನ್ ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತ ಸಮುದಾಯದ ಹಿತ ಕಾಪಾಡಿದೆ ಎಂದು ದ.ಕ. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿವರ್ಸ್ ಗೇರ್ ಕಾಂಗ್ರೆಸ್ ಪಕ್ಷದ ಹೆಚ್ಚಿನ ಇಳುವರಿ ಮತ್ತು ಹೆಚ್ಚಿನ ಆದಾಯದ ಭರವಸೆ ಕೇವಲ ಮಾತಿನಲ್ಲೇ ಉಳಿದ ಕಾರಣ ಬೆಳೆ ಬೆಳೆಯಬೇಕಾದ ಭೂಮಿ ಬಂಜರಾಯಿತು. ಆದರೆ ಮೋದಿ ಸರಕಾರವು ರೈತರಿಗೆ ಕನಿಷ್ಠ ಜೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ಏರಿದೆ. ರೈತರಲ್ಲಿ ಹೊಸ ಭರವಸೆ ಮೂಡಿದೆ ಎಂದರು.
ಕಿಸಾನ್ ಮಾನ್‌ಧನ್ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರದಿಂದ 6,000 ರೂ. ಮತ್ತು ರಾಜ್ಯ ಸರಕಾರ ದಿಂದ 4,000 ರೂ. ಸಹಿತ 10,000 ರೂ.ಗಳ ಗೌರವ ಧನದ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ 54 ಲಕ್ಷ ಅರ್ಹ ರೈತರಿಗೆ ನೀಡಲಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯೂರಿಯಾವನ್ನು ಖಾಸಗಿ ಕೈಗಾರಿಕೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರಿಂದ ರೈತರು ಸಂಕಷ್ಟಕ್ಕೀಡಾದರು ಎಂದು ರಾಧಾಕೃಷ್ಣ ಬೊಳ್ಳೂರು ಆಪಾದಿಸಿರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯ ದ.ಕ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ರಾಘವೇಂದ್ರ ಭಟ್ ಪಿ, ಮಂಗಳೂರು ತಾಲೂಕು ರೈತ ಮೋರ್ಚಾ ಸದಸ್ಯ ಸತ್ಯಪ್ರಸಾದ ಪೊಳಿಮಾರಡ್ಕ, ಬಿಜೆಪಿ ಪ್ರಮುಖರಾದ ಸಂಜಯ ಪ್ರಭು, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.