ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತು ಪಡಿಸಲಿ: ಸಂಸದ ತೇಜಸ್ವಿ ಸೂರ್ಯ

ಬೈಂದೂರು, ಎ.20: ಬಿಜೆಪಿಯ ಮೇಲೆ ಹಿಟ್ ಆ್ಯಂಡ್ ರನ್ ರೀತಿ ಭ್ರಷ್ಟಾಚಾರ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ ನಾಯಕರು ಆರೋಪಗಳನ್ನು ಸಾಬೀತು ಮಾಡುತ್ತಿಲ್ಲ. ನಮ್ಮ ಮೇಲಿನ ಭ್ರಷ್ಟಾಚಾರದ ಕುರಿತು ದಾಖಲಾತಿ ಇದ್ದರೆ ಕೋರ್ಟ್‌ಗೆ ಹೋಗಿ ಸಾಬೀತು ಮಾಡುವ ಧೈರ್ಯ ತೋರಿಸಲಿ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೈಂದೂರು ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲುವ ಕ್ಷೇತ್ರವಿದ್ದರೆ ಅದು ಗುರುರಾಜ್ ಗಂಟಿಹೊಳೆ ಪ್ರತಿನಿಧಿಸುವ ಬೈಂದೂರು ವಿಧಾನಸಭಾ ಕ್ಷೇತ್ರ. ಇಡೀ ಕರಾವಳಿಯಲ್ಲಿ ಭಾಜಪದ ಪರವಾದ ಬಹಳ ದೊಡ್ಡ ಅಲೆ ಇದೆ ಎಂದರು.
ಚಿತ್ರ ನಟಿ ಶ್ರುತಿ ಮಾತನಾಡಿ, ಒಬ್ಬ ಚಾ ಮಾರುವ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗಿದ್ದು ನಮ್ಮ ಕಣ್ಮುಂದೆ ಇದೆ. ಹಾಗೆಯೇ ಬಡವರ ಮನೆ ಹುಡುಗನನ್ನು ಶಾಸಕನಾಗಿ ಕಾಣುವ ದಿನಗಳು ದೂರವಿಲ್ಲ. ಈ ಚುನಾವಣೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ 60ಕ್ಕೂ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಪ್ರಾಶಸ್ತ್ಯ ನೀಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಖಂಡರಾದ ಸದಾನಂದ ಉಪ್ಪಿನಕುದ್ರು, ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.