ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶ ನಿರ್ಬಂಧ: ಸಿಬಿಐಗೆ ಹೈಕೋರ್ಟ್‍ನಿಂದ ನೋಟಿಸ್

ಬೆಂಗಳೂರು, ಎ.20: ಚುನಾವಣಾ ಪ್ರಚಾರ ನಿಮಿತ್ತ ಧಾರವಾಡ ಜಿಲ್ಲೆ ಪ್ರವೇಶಿಸಿ 30 ದಿನಗಳ ಕಾಲ ಅಲ್ಲಿಯೇ ಇರಲು ಅನುಮತಿ ನೀಡಬೇಕು ಎಂದು ಕೋರಿರುವ ಮತ್ತು ಬಿಜೆಪಿ ಮುಖಂಡ ಯೋಗೀಶ್‍ಗೌಡ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ(ಸಿಬಿಐ) ತನಿಖೆಗೆ ವಹಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಿಬಿಐಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೆ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಅನುಮತಿ ಪಡಯದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದು ಸೇರಿ ನಾಲ್ಕು ಷರತ್ತುಗಳನ್ನು ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್ ವಿಧಿಸಿತ್ತು.
ಅಲ್ಲದೆ, ಚುನಾವಣಾ ಪ್ರಚಾರಕ್ಕಾಗಿ ಧಾರವಾಡ ಜಿಲ್ಲೆ ಪ್ರವೇಶಕ್ಕೆ 50 ದಿನಗಳ ಕಾಲ ಅಲ್ಲಿಯೇ ಇರಲು ಅನುಮತಿ ನೀಡಬೇಕು ಎಂದು ಕೋರಿ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತಿರಸ್ಕರಿಸಿತ್ತು.







