ಉ.ಪ್ರ.: ನಮಾಝ್ ಮಾಡುವಂತೆ ವಿದ್ಯಾರ್ಥಿಗಳಿಗೆ ಬಲವಂತಪಡಿಸಿದ ಆರೋಪ: ಶಾಲಾ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಅಮಾನತು
ಆರೋಪ ನಿರಾಕರಿಸಿದ ಶಾಲೆಯ ಆಡಳಿತ ಮಂಡಳಿ

ಲಕ್ನೋ, ಎ. 20: ನಮಾಝ್ ಮಾಡುವಂತೆ ವಿದ್ಯಾರ್ಥಿಗಳಿಗೆ ಬಲವಂತಪಡಿಸಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ನೇತೃತ್ವದಲ್ಲಿ ಹೆತ್ತವರು ಪ್ರತಿಭಟನೆ ನಡೆಸಿದ ಬಳಿಕ ಹಾಥರಸ್ ನಗರದ ಶಾಲೆಯೊಂದರ ಪ್ರಾಂಶುಪಾಲರು ಹಾಗೂ ಇಬ್ಬರು ಶಿಕ್ಷಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಆದರೆ, ಈ ಆರೋಪವನ್ನು ಶಾಲೆಯ ಆಡಳಿತ ಮಂಡಳಿ ನಿರಾಕರಿಸಿದೆ.
ಆರೋಪದ ಹಿನ್ನೆಲೆಯಲ್ಲಿ ಬಿಎಲ್ಎಸ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಸೋನಿಯಾ ಮೆಕ್ಫೆರ್ಸನ್ ಹಾಗೂ ಶಿಕ್ಷಕರಾದ ಇರ್ಫಾನ್ ಇಲಾಹಿ ಹಾಗೂ ಕನ್ವರ್ ರಿಝ್ವಾನ್ ವಿರುದ್ಧ ದಂಡನೀಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
‘‘ಎಪ್ರಿಲ್ 18ರಂದು ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ವಿಶ್ವ ಪಾರಂಪರಿಕ ದಿನ ಹಾಗೂ ಈದ್ ಆಚರಿಸಲಾಗಿತ್ತು. ಈ ಸಂದರ್ಭ ಕವಿ ಮುಹಮ್ಮದ್ ಇಕ್ಬಾಲ್ ಅವರು ರಚಿಸಿದ ಕವಿತೆ ‘‘ಲಬ್ ಪೆ ಆತಿ ಹೈ ದುವಾ...’’ ಹಾಡಲಾಗಿತ್ತು. ನಮಾಝ್ ಮಾಡಿಲ್ಲ ಹಾಗೂ ನಮಾಝ್ ಮಾಡಲು ಯಾರಿಗೂ ಬಲವಂತಪಡಿಸಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ’’ ಎಂದು ಶಾಲೆಯ ಉಪ ಪ್ರಾಂಶುಪಾಲ ಕಾರ್ನಿಕ್ ಶ್ರೀವಾತ್ಸವ್ ಅವರು ಹೇಳಿದ್ದಾರೆ.
ಆದರೂ ಶಾಲಾ ಆಡಳಿತ ಮಂಡಳಿ ತನಿಖಾ ಸಮಿತಿಯನ್ನು ರೂಪಿಸಿದೆ ಹಾಗೂ ಮೇಲ್ನೋಟದ ಕ್ರಮವಾಗಿ ಪ್ರಾಂಶುಪಾಲರು ಹಾಗೂ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದೆ. ಜಿಲ್ಲಾಡಳಿತ ಕೂಡ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿ ರೂಪಿಸಿದೆ.
ಬುರ್ಖಾ ಧರಿಸುವಂತೆ ಹಾಗೂ ನಮಾಝ್ ಮಾಡುವಂತೆ ಮಕ್ಕಳಿಗೆ ಬಲವಂತ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಘಪರಿವಾರದ ನಾಯಕ ದೀಪಕ್ ಶರ್ಮಾ ಅವರ ನೇತೃತ್ವದಲ್ಲಿ ಹೆತ್ತವರು ಬುಧವಾರ ಪ್ರತಿಭಟನೆ ನಡೆಸಿದ್ದರು.
ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಆಗ್ರಹಿಸಿದ್ದರು ಪ್ರತಿಭಟನಕಾರರು ಹನುಮಾನ್ ಚಾಲಿಸ್ ಅನ್ನು ಕೂಡ ಪಠಿಸಿದ್ದರು. ಇಕ್ಬಾಲ್ ಅವರ ಕವಿತೆ ಹಾಡಿರುವುದನ್ನು ಸಂಘಪರಿವಾರ ವಿರೋಧಿಸುತ್ತಿರುವುದು ಇದೇ ಮೊದಲಲ್ಲ.







