ಉಡುಪಿ: ಯಶ್‌ಪಾಲ್ ಸುವರ್ಣ 6.24 ಕೋಟಿ ರೂ. ಆಸ್ತಿಯ ಒಡೆಯ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದು ತಮ್ಮ ನಾಮಪತ್ರ ಸಲ್ಲಿಸಿರುವ ಯಶ್‌ಪಾಲ್ ಸುವರ್ಣ (44) ಒಟ್ಟು 6,24,58,781 ರೂ.ಗಳ ಒಡೆಯ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದವಿತ್ ನಿಂದ ತಿಳಿದುಬರುತ್ತದೆ.
ಯಶ್‌ಪಾಲ್ ಸುವರ್ಣ ಅವರಲ್ಲಿ 4,29,20,372 ರೂ. ಚರಾಸ್ಥಿ ಇದ್ದು, ಇದರೊಂದಿಗೆ 1,95,38,409ರೂ. ಸ್ಥಿರಾಸ್ಥಿಯನ್ನೂ ಹೊಂದಿದ್ದಾರೆ. ಸದ್ಯ ಅವರ ಬಳಿ 1,06,300ರೂ.ನಗದು ಇದೆ.
ಚರಾಸ್ಥಿಗಳಲ್ಲಿ 18 ಬ್ಯಾಂಕುಗಳು, ಸಹಕಾರಿ ಸಂಘ, ಸೊಸೈಟಿ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ 38.79 ಲಕ್ಷ ರೂ. ಠೇವಣಿ ಇದೆ. ಬಾಂಡ್, ಮ್ಯುಚವಲ್ ಫಂಡ್, ಡಿಬೆಂಚರ್‌ಗಳಲ್ಲಿ 17.99 ಲಕ್ಷ ರೂ., ಎನ್‌ಎಸ್‌ಎಸ್, ಪೋಸ್ಟಲ್, ವಿಮೆಯಲ್ಲಿ 17.71 ಲಕ್ಷ ರೂ.ವನ್ನು ತೊಡಿಸಿಕೊಂಡಿದ್ದರೆ, ಕೆಲವರಿಗೆ ನೀಡಿರುವ ಸಾಲ, ಮುಂಗಡ, ವಿವಿಧ ಕಂಪೆನಿಗಳಲ್ಲಿ ಹೂಡಿರುವ ಬಂಡವಾಳ ಮೊತ್ತ 3.04 ಕೋಟಿ ರೂ.ಗಳಾಗಿವೆ.
ಇದರೊಂದಿಗೆ 20 ಲಕ್ಷ ರೂ.ಮೌಲ್ಯದ ಮೀನುಗಾರಿಕಾ ಬೋಟ್, 25.09 ಲಕ್ಷ ರೂ.ಮೌಲ್ಯದ ಕಾರು, ಬೈಕ್ ಸೇರಿ ವಿವಿಧ ವಾಹನಗಳು, 25.56 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣಗಳು ಒಟ್ಟು ಚರಾಸ್ಥಿಯ ಮೌಲ್ಯ 4.29 ಕೋಟಿ ರೂ.ಗಳಾಗಿವೆ. 2017-18ರಲ್ಲಿ 51.40 ಲಕ್ಷರೂ. ಇದ್ದ ಇವರ ಆದಾಯ, 2021-22ನೇ ಸಾಲಿನಲ್ಲಿ 43.01ಲಕ್ಷ ರೂ.ಗಳಾಗಿದೆ ಎಂದು ಅವರು ತಿಳಿಸಿದ್ದಾರೆ.
1.95 ಕೋಟಿ ರೂ. ಸ್ಥಿರಾಸ್ಥಿಗಳಲ್ಲಿ ಉಳಿಯಾರಗೊಳಿಯಲ್ಲಿ 30 ಲಕ್ಷ ರೂ.ಮೌಲ್ಯದ 0.49 ಎಕರೆ ಜಾಗ, 35 ಲಕ್ಷ ರೂ.ಮೌಲ್ಯದ ಮನೆ, 15 ಲಕ್ಷ ರೂ.ಮೌಲ್ಯದ ಮನೆ ಹಾಗೂ ಭೂಮಿಯಲ್ಲಿ ಮಾಡಿದ ಹೂಡಿಕೆಗಳು ಸೇರಿವೆ ಎಂದು ಅಫಿದವತ್‌ನಲ್ಲಿ ತಿಳಿಸಲಾಗಿದೆ.
ಇವುಗಳೊಂದಿಗೆ ಯಶ್‌ಪಾಲ್ ಸುವರ್ಣ ಅವರು ವಿವಿಧ ಬ್ಯಾಂಕುಗಳು, ಸೊಸೈಟಿ, ಆರ್ಥಿಕ ಸಂಸ್ಥೆಗಳಿಂದ 2,85,34,604ರೂ. ಸಾಲವೂ ಅವರ ಮೇಲಿದೆ. ಇದರಲ್ಲಿ ವಿವಿಧ ವ್ಯಕ್ತಿಗಳಿಂದ ಪಡೆದ 80 ಲಕ್ಷ ರೂ. ಸಾಲವೂ ಸೇರಿದೆ.
ಬಿಜೆಪಿ ಉಡುಪಿ ಅಭ್ಯರ್ಥಿ ವಿರುದ್ಧ ಕಳೆದ ಮಾರ್ಚ್ 8ರಂದು ಮಲ್ಪೆ ಠಾಣೆಯಲ್ಲಿ ದಾಖಲಾದ ಒಂದು ಮೊಕದ್ದಮೆ ಇದೆ. ಮಹಾಲಕ್ಷೀ ಬ್ಯಾಂಕಿನ ಮಲ್ಪೆ ಶಾಖೆಯ ಮ್ಯಾನೇಜರ್ ಸುಬ್ಬಣ್ಣ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಸಹೋದರ, ಆತ್ಮಹತ್ಯೆಗೆ ಕಾರಣರಾದವರೆಂದು ಹೆಸರಿಸಿದ ಆರೋಪಿಗಳಲ್ಲಿ ತಮ್ಮ ಹೆಸರು ಸೇರಿದೆ ಎಂದವರು ಅಫಿದವತ್‌ನಲ್ಲಿ ತಿಳಿಸಿದ್ದಾರೆ.







