ದಲಿತ ಕ್ರೈಸ್ತರಿಗೆ ಮೀಸಲಾತಿ ವಿಸ್ತರಿಸಲು ತಮಿಳುನಾಡು ವಿಧಾನ ಸಭೆ ನಿರ್ಣಯ ಅಂಗೀಕಾರ

ಚೆನ್ನೈ, ಎ. 20: ಕ್ರೈಸ್ತ ಮತಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ ಸದಸ್ಯರಿಗೆ ಮೀಸಲಾತಿ ವಿಸ್ತರಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ತಮಿಳುನಾಡು ವಿಧಾನ ಸಭೆ ಬುಧವಾರ ನಿರ್ಣಯ ಅಂಗೀಕರಿಸಿದೆ.
ಈ ನಿರ್ಣಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಡಿಸಿದರು. ಅಲ್ಲದೆ, ದಲಿತ ಕ್ರೈಸ್ತರಿಗೆ ಶಾಸನಾತ್ಮಕ ರಕ್ಷಣೆ, ಹಕ್ಕು ಹಾಗೂ ವಿನಾಯತಿಯನ್ನು ವಿಸ್ತರಿಸುವಂತೆ ಕೋರಿದರು.
ಸಂವಿಧಾನದ ಪ್ರಕಾರ ಹಿಂದೂ, ಸಿಕ್ಖ್ ಹಾಗೂ ಬೌದ್ಧರು ಮಾತ್ರ ಪರಿಶಿಷ್ಟ ಜಾತಿ ಹಕ್ಕು ಪ್ರತಿಪಾದಿಸಬಹುದು. ಮತಾಂತರಗೊಂಡ ದಲಿತರು ಪರಿಶಿಷ್ಟ ಜಾತಿ ಸ್ಥಾನಮಾನ ಪರಿಗಣಿತವಾದರೆ ಮಾತ್ರ ಸರಕಾರ ಉದ್ಯೋಗ ಹಾಗೂ ಕಾಲೇಜುಗಳಲ್ಲಿ ಮೀಸಲಾತಿ ಪಡೆಯುತ್ತಾರೆ.
ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರು ಮೀಸಲಾತಿಯನ್ನು ಅನುಭವಿಸುತ್ತಿರುವಾಗ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಏಕೈಕ ಕಾರಣಕ್ಕೆ ಇತರ ದಲಿತರಿಗೆ ಮೀಸಲಾತಿ ನಿರಾಕರಿಸುತ್ತಿರುವುದು ಅನ್ಯಾಯ ಎಂದು ಸ್ಟಾಲಿನ್ ಅವರು ಬುಧವಾರ ಹೇಳಿದ್ದಾರೆ.
‘‘ಮಾನವರು ತಮ್ಮ ಇಚ್ಛೆಯ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ.
ಆದರೆ, ಜಾತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ’’ ಎಂದು ಸ್ಟಾಲಿನ್ ವಿಧಾನ ಸಭೆಯಲ್ಲಿ ಹೇಳಿದರು. ಜಾತಿ ಎನ್ನುವುದು ಇಬ್ಬರು ವ್ಯಕ್ತಿಗಳ ಗುರುತು ಮಾತ್ರವಲ್ಲ. ಇಲ್ಲಿ ಒಬ್ಬರು ಮೇಲೆ ಇನ್ನೊಬ್ಬರು ಕೆಳಗೆ ಎಂಬ ಶ್ರೇಣೀಕರಣ ಇದೆ. ಇದು ಸಮತಲವಾಗಿಲ್ಲ. ಲಂಬಾಕಾರವಾಗಿದೆ. ಸಾಮಾಜಿಕ ನ್ಯಾಯದ ಸಿದ್ಧಾಂತ ತುಳಿತಕ್ಕೊಳಗಾದವರಿಗೆ ಮೀಸಲಾತಿ ನೀಡುವ ಹಾಗೂ ತುಳಿತುಕ್ಕೊಳಗಾದ ಸಂತ್ರಸ್ತರನ್ನು ಮೇಲಕ್ಕೆತ್ತುವ ಸಾಧನವಾಗಿ ಬಳಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ನಿರ್ಣಯವನ್ನು ಪ್ರತಿಪಕ್ಷವಾದ ಬಿಜೆಪಿ ವಿರೋಧಿಸಿತು ಹಾಗೂ ವಿಧಾನ ಸಭೆಯಿಂದ ಹೊರ ನಡೆಯಿತು. ‘‘ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಣಯವನ್ನು ಮಂಡಿಸಿದ್ದೇವೆ. ಬಿಜೆಪಿ ಸದನ ತ್ಯಜಿಸಿರುವುದು ನಾವು ಸೂಕ್ತ ರೀತಿಯಲ್ಲಿ ಮಾಡಿದ್ದೇವೆ ಎಂಬುದನ್ನು ದೃಢಪಡಿಸಿದೆ’’ಎಂದು ಸ್ಟಾಲಿನ್ ಹೇಳಿದರು.







