ಬೈಂದೂರು: ಗುರುರಾಜ್ ಶೆಟ್ಟರ ಒಟ್ಟು ಆದಾಯ 7.63 ಕೋಟಿ ರೂ.

ಉಡುಪಿ, ಎ.21: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೇಟ್ ಪಡೆದು ಇಂದು ನಾಮಪತ್ರ ಸಲ್ಲಿಸಿರುವ ಬೈಂದೂರು ತಾಲೂಕು ಬಿಜೂರು ನಿವಾಸಿ ಗುರುರಾಜ್ ಶೆಟ್ಟಿ ಗಂಟಿಹೊಳೆ (42) ಅವರ ಒಟ್ಟು ಆದಾಯ 7.63 ಕೋಟಿ ರೂ. ಆಗಿದ್ದರೆ, ಪತ್ನಿ ಅನುರಾಧ ಶೆಟ್ಟಿ ಅವರ ಆದಾಯ 2.12 ಕೋಟಿ ರೂ. ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿದವತ್‌ನಲ್ಲಿ ತಿಳಿಸಲಾಗಿದೆ.
ಗುರುರಾಜ್ ಅವರ ಬಳಿ 1,76,844 ರೂ. ಚರಾಸ್ಥಿ ಇದ್ದರೆ, ಸ್ಥಿರಾಸ್ಥಿಯ ಮೌಲ್ಯ 7,61,40,000ರೂ. ಆಗಿದೆ. ಇದರಲ್ಲಿ ಪಿತ್ರಾರ್ಜಿತ ಆಸ್ತಿಯ ಮೌಲ್ಯ 32,70,000 ರೂ. ಆಗಿದ್ದರೆ, ಸ್ವಯಾರ್ಜಿತ ಆಸ್ತಿ ಮೌಲ್ಯ 7,28,70,00ರೂ. ಎಂದು ತಿಳಿಸಲಾಗಿದೆ.
ಗುರುರಾಜರ ಪತ್ನಿ ಅನುರಾಧ ಅವರಲ್ಲಿ 18,74,166ರೂ. ಚರಾಸ್ಥಿ ಇದ್ದರೆ, ಸ್ಥಿರಾಸ್ಥಿಯ ಮೌಲ್ಯ 1,93,50,000 ರೂ. ಆಗಿದೆ. ಅವರಲ್ಲಿ 8.65 ಲಕ್ಷ ರೂ. ಮೌಲ್ಯದ 346ಗ್ರಾಂ ಚಿನ್ನಾಭರಣಗಳಿವೆ. ಇಬ್ಬರ ಕೈಯಲ್ಲೂ 35,000 ಹಾಗೂ 70,000ರೂ.ನಗದು ಹಣವಿದೆ.
ಗುರುರಾಜ್ ಅವರು ವೈಯಕ್ತಿಕವಾಗಿ 1.64 ಕೋಟಿ ರೂ. ಸಾಲವನ್ನು ಹೊಂದಿದ್ದರೆ, 45ಶೇ. ಶೇರ್‌ನ್ನು ಹೊಂದಿರುವ ಶ್ರೀ ಕ್ಯಾಶ್ಯೂ ಫರ್ಮ್‌ನಲ್ಲಿ 9,10,63,000 ಸಾಲವನ್ನು ಹೊಂದಿದ್ದಾರೆ ಎಂದು ಅಫಿದವತ್‌ನಲ್ಲಿ ತಿಳಿಸಲಾಗಿದೆ.
ಗುರುರಾಜ್ ವಿರುದ್ಧ ಯಾವುದೇ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಆದರೆ 2018ರಲ್ಲಿ ಆರು ಲಕ್ಷ ರೂ. ಮೊತ್ತದ ಚೆಕ್‌ಬೌನ್ಸ್ ಕೇಸಿನಲ್ಲಿ ಕುಂದಾಪುರ ನ್ಯಾಯಾಲಯ ಅವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಇದಕ್ಕೆ 2022ರಲ್ಲಿ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯ ದಿಂದ ತಡೆಯಾಜ್ಞೆ ಪಡೆಯಲಾಗಿದೆ. ಇದರ ವಿಚಾರಣೆ ಮೇ ತಿಂಗಳಲ್ಲಿ ನಡೆಯಲಿದೆ ಎಂದು ಅಫಿದವತ್‌ನಲ್ಲಿ ಹೇಳಲಾಗಿದೆ.







