ಮಂಗಳೂರು: ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಂಚನೆ

ಮಂಗಳೂರು, ಎ.20: ಇನ್‌ಸ್ಟಾಗ್ರಾಂ ಖಾತೆಯ ಮೂಲಕ 90 ಸಾವಿರ ರೂ. ವಂಚನೆ ಮಾಡಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಿರ್ಯಾದಿದಾರರು ಎ.11ರಂದು ರಾತ್ರಿ ಇನ್‌ಸ್ಟಾ ಗ್ರಾಂ ಖಾತೆಯನ್ನು ವೀಕ್ಷಿಸುತ್ತಿದ್ದಾಗ ಅವರ ಗೆಳೆಯನ ಖಾತೆಯಿಂದ ‘ರಿಸೀವ್ಡ್ ರುಪೀಸ್ 4,16,000 ಇನ್ ಯುವರ್ ಇನ್‌ಸ್ಟಾಗ್ರಾಂ ವಾಲೆಟ್’ ಎಂಬ ಪೋಸ್ಟ್ ಬಂದಿದೆ. ತಕ್ಷಣ ಅವರಿಗೆ ‘ಲಿಝಿ ಹೋಪರ್’ ಎನ್ನುವ ಖಾತೆಯಿಂದ ಸಂದೇಶಗಳು ಬರಲು ಆರಂಭಿಸಿದ್ದು, ಅದು ಗೆಳೆಯನ ಇನ್‌ಸ್ಟಾಗ್ರಾಂ ಖಾತೆ ಎಂದು ನಂಬಿ ಎ.12ರಂದು 40,000 ರೂ. ಮತ್ತು 13ರಂದು ಕ್ಯಾಶ್ ವಿಡ್ರಾವಲ್ ಪಿನ್ ಫೀ ಎಂದು 50 ಸಾವಿರ ರೂ.ವನ್ನು ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ ಅದೇ ದಿನ ಇನ್ನೂ 70,000 ರೂ. ಹಣವನ್ನು ವರ್ಗಾಯಿಸಲು ತಿಳಿಸಿದ್ದು, ಈ ಬಗ್ಗೆ ಗೆಳೆಯನಿಗೆ ಕರೆ ಮಾಡಿದಾಗ ಆತ ‘ತನ್ನ ಖಾತೆಯು ಸುಮಾರು 6 ತಿಂಗಳಿನಿಂದ ಹ್ಯಾಕ್ ಆಗಿರುವುದಾಗಿ’ ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯಾರೋ ಅಪರಿಚಿತರು ಫಿರ್ಯಾದಿದಾರರ ಗೆಳೆಯನ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿ ಬಿಟ್‌ಕಾಯಿನ್ ಜಾಹೀರಾತು ಕಳುಹಿಸಿ, 90 ಸಾವಿರ ರೂ. ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ಹಾಗಾಗಿ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.