ಮಂಗಳೂರು: ಫೇಸ್‌ಬುಕ್ ಸಂದೇಶಕ್ಕೆ ಲೈಕ್ ಕೊಟ್ಟು ಹಣ ಕಳಕೊಂಡ ವ್ಯಕ್ತಿ!

ಮಂಗಳೂರು, ಎ.20: ಫೇಸ್‌ಬುಕ್‌ನಲ್ಲಿ ಬಂದ ಸಂದೇಶವೊಂದಕ್ಕೆ ಲೈಕ್ ಕೊಟ್ಟ ವ್ಯಕ್ತಿಯು ಲಕ್ಷಕ್ಕೂ ಅಧಿಕ ಹಣವನ್ನು ಕಳಕೊಂಡಿರುವುದಾಗಿ ಮಂಗಳೂರು ಸೆನ್ ಠಾಣೆಗೆ ದೂರು ನೀಡಲಾಗಿದೆ.
ಫಿರ್ಯಾದಿದಾರರು ಫೆ.13ರಂದು ಫೇಸ್‌ಬುಕ್‌ನಲ್ಲಿ ‘ಐಫೋನ್’ ಎಂಬ ಮೊಬೈಲ್ ವೀಡಿಯೋ ನೋಡಿ, ಅದಕ್ಕೆ ಲೈಕ್ ಕೊಟ್ಟಿದ್ದಾರೆ. ಫೆ.15ರಂದು ಅಪರಿಚಿತ ನಂಬರ್‌ನಿಂದ ಸಂದೇಶ ಬಂದಿದ್ದು, ತಾನು ಆರ್ಮಿ ಅಧಿಕಾರಿ, 15 ಸಾವಿರಕ್ಕೆ ಐಫೋನ್ ಸಿಗುತ್ತದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಬಳಿಕ ಅದೇ ನಂಬರ್‌ನಿಂದ ಕರೆ ಬಂದಿದ್ದು, ಆ ವ್ಯಕ್ತಿ ಆರ್ಮಿ ಐಡಿ ಕಾರ್ಡನ್ನು ಕಳಹಿಸಿ, ಐಫೋನ್ ಕೋರಿಯರ್ ಮಾಡುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಗೂಗಲ್ ಪೇ ನಂಬರ್ ಕಳುಹಿಸಿಕೊಟ್ಟು ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ಹಂತ ಹಂತವಾಗಿ ಫಿರ್ಯಾದಿದಾರರು 1,36,515 ರೂ. ಹಣವನ್ನು ಕಳುಹಿಸಿದ್ದಾರೆ. ಆದರೆ ಬಳಿಕ ಮೊಬೈಲ್ ಅಥವಾ ಕಳುಹಿಸಿದ ಹಣ ವಾಪಸ್ ಬಂದಿಲ್ಲ. ಇದರಿಂದ ತಾನು ಮೋಸ ಹೋಗಿರುವುದಾಗಿ ಫಿರ್ಯಾದಿದಾರರು ದೂರಿನಲ್ಲಿ ತಿಳಿಸಿದ್ದಾರೆ.
Next Story