2025ಕ್ಕೆ 121 ವಿಮಾನ ನಿಲ್ದಾಣಗಳಲ್ಲಿ ಹಸಿರು ಇಂಧನ ಬಳಕೆ ಭಾರತದ ಗುರಿ: ಕೇಂದ್ರ ವಾಯುಯಾನ ಸಚಿವ

ಹೊಸದಿಲ್ಲಿ,ಎ.20: ಪ್ರಸ್ತುತ ದೇಶದಲ್ಲಿಯ 25 ವಿಮಾನ ನಿಲ್ದಾಣಗಳು ಹಸಿರು ಇಂಧನವನ್ನು ಬಳಸುತ್ತಿದ್ದು, 2025ರ ವೇಳೆಗೆ ಇದನ್ನು ಇನ್ನೂ 121 ವಿಮಾನ
ನಿಲ್ದಾಣಗಳಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಗುರುವಾರ ಪ್ರಕಟಿಸಿದರು.
ಎರಡು ದಿನಗಳ ಐರೋಪ್ಯ ಒಕ್ಕೂಟ-ಭಾರತ ವಾಯುಯಾನ ಶೃಂಗಸಭೆಯಲ್ಲಿ ಮಾಡಿದ ತನ್ನ ವರ್ಚುವಲ್ ಭಾಷಣದಲ್ಲಿ ಸಿಂದಿಯಾ ಈ ವಿಷಯವನ್ನು ತಿಳಿಸಿದರು. ಕೋವಿಡ್ಗೆ ಪಾಸಿಟಿವ್ ಆಗಿರುವ ಸಿಂದಿಯಾ ಶೃಂಗಸಭೆಯಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗಿಲ್ಲ.
‘ಇಂಗಾಲ ಹೊರಸೂಸುವಿಕೆಯಲ್ಲಿ ವಾಯುಯಾನ ಉದ್ಯಮದ ಕೊಡುಗೆಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದೆ. ವಾಯುಯಾನ ಉದ್ಯಮದಿಂದ ಇಂಗಾಲ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಹೇಳಿದ ಸಿಂದಿಯಾ,ಭಾರತ ಮತ್ತು ಐರೋಪ್ಯ ಒಕ್ಕೂಟ ಹವಾಮಾನ ಬದಲಾವಣೆಯನ್ನು ಎದುರಿಸುವ ಸಮಾನ ಗುರಿಯನ್ನು ಹೊಂದಿವೆ ಎಂದು ಒತ್ತಿ ಹೇಳಿದರು.
‘2024ರ ವೇಳೆಗೆ ಹಸಿರು ಇಂಧನವನ್ನು ಬಳಸಲು ಮತ್ತು 2030ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸಲು ನಮ್ಮ ವಿಮಾನ ನಿಲ್ದಾಣಗಳನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಸಿಂದಿಯಾ ನುಡಿದರು.
ಗುರುವಾರ ಆರಂಭಗೊಂಡಿರುವ ಶೃಂಗಸಭೆಯು ಐರೋಪ್ಯ ಒಕ್ಕೂಟ-ಭಾರತ ವಾಯು ಸಾರಿಗೆ ಸಂಬಂಧಗಳು ಹಾಗೂ ಕೋವಿಡ್ ಬಳಿಕ ವಿಮಾನ ಸಂಚಾರದ ಚೇತರಿಕೆ,ಹೆಚ್ಚಿನ ಸುಸ್ಥಿರತೆ,ಸುರಕ್ಷತೆ ಮತ್ತು ಮಾನವರಹಿತ ವಿಮಾನ ವ್ಯವಸ್ಥೆಗಳ ಅಭಿವೃದ್ಧಿಯಂತಹ ಉಭಯ ಪ್ರದೇಶಗಳು ಪರಸ್ಪರ ಹಂಚಿಕೊಂಡಿರುವ ಸವಾಲುಗಳು ಮತ್ತು ಅವಕಾಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ.
ಉದ್ಯಮಕ್ಕೆ ಗರಿಷ್ಠ ಅನುಕೂಲವಾಗುವಂತೆ ದೇಶದಲ್ಲಿ ವಿಮಾನ ತಯಾರಿಕೆಯನ್ನು ಉತ್ತೇಜಿಸಲು ಭಾರತವು ನಿಯಂತ್ರಣ ಕಾರ್ಯವಿಧಾನವನ್ನು ಉತ್ತಮಗೊಳಿಸಿದೆ ಎಂದು ಹೇಳಿದ ಸಿಂದಿಯಾ,ಈ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮತ್ತು ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಉದ್ಯಮದ ಭಾಗವಾಗುವಂತೆ ಐರೋಪ್ಯ ಒಕ್ಕೂಟದ ಉದ್ಯಮಿಗಳನ್ನು ಆಗ್ರಹಿಸಿದರು.







