ನೀವು ಏನೇ ಮಾಡಿದರೂ ಶರಣಾಗುವುದಿಲ್ಲ: ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಮಂಡ್ಯ, ಎ.20: ನನ್ನನ್ನು ಜೈಲಿಗೆ ಹಾಕಿದ್ದಾಯಿತು. ಐಟಿ, ಇಡಿ ಎಂದು ಅಲೆಸಿದ್ದಾಯಿತು. ರಾಹುಲ್ ಗಾಂಧಿಯವರನ್ನೇ ಬಿಡದ ನೀವು ನನ್ನನ್ನು ಬಿಡುತ್ತೀರಾ. ತಿಳ್ಕೊಳ್ಳಿ, ನೀವು ಏನೇ ಮಾಡಿದರೂ ನಾನು ಶರಣಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಗುರವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ನನಗೆ ಏನೇ ಮಾಡಿದರೂ ನಾನು ಎಂದಿಗೂ ಶರಣಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ರಾಜ್ಯದ ಜನರು ನನಾಗಿ ಮರುಗಿದರು, ಪ್ರಾರ್ಥನೆ ಮಾಡಿದರು, ನನ್ನನ್ನು ಸಂತೈಸಿದರು. ಅವರ ಪ್ರೀತಿ ರಕ್ಷಣೆಯೇ ನನಗೆ ಮುಖ್ಯ. ಅವರ ಋಣವನ್ನು ತೀರಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ದೇಶದ ಶಕ್ತಿಯಾಗಿದೆ. ಇತಿಹಾಸವೆಂದರೆ ಅದು ಕಾಂಗ್ರೆಸ್ ಇತಿಹಾಸ. ಜನರನ್ನು ರಕ್ಷಣೆ ಮಾಡುವುದು, ಅಭಿವೃದ್ಧಿ ಮಾಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಮೇ 10 ನಡೆಯುವ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್‍ಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಟಿಕೆಟ್ ಬಯಸಿದ್ದ 16 ಮಂದಿ ಆಕಾಂಕ್ಷಿತರಿಗೂ ಟಿಕೆಟ್ ಪಡೆಯುವ ಅರ್ಹತೆ ಇತ್ತು. ಆದರೆ, ಪಕ್ಷ ಗಣಿಗ ರವಿಕುಮಾರ್‍ಗೆ ಟಿಕೆಟ್ ನೀಡಿದೆ. ಭಿನ್ನಾಭಿಪ್ರಾಯ ಬದಿಗೊತ್ತಿ, ಮೇಲುಕೋಟೆಯ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಕೋರಿದರು.
ಅಭ್ಯರ್ಥಿ ರವಿಕುಮಾರ್ ಗಣಿಗ, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಎಂ.ಎಸ್.ಆತ್ಮಾನಂದ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ಮುಖಂಡರಾದ ಕೀಲಾರ ರಾಧಾಕೃಷ್ಣ, ಅಮರಾವತಿ ಚಂದ್ರಶೇಖರ್, ಇತರರು ಉಪಸ್ಥಿತರಿದ್ದರು.







