ಬುದ್ಧರ ಬೋಧನೆಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ: ಪ್ರಧಾನಿ ಮೋದಿ

ಹೊಸದಿಲ್ಲಿ,ಎ.20: ಜಗತ್ತು ಇಂದು ಯುದ್ಧ,ಆರ್ಥಿಕ ಅಸ್ಥಿರತೆ, ಭೀತಿವಾದ,ಧಾರ್ಮಿಕ ಉಗ್ರವಾದ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳ ಮೂಲಕ ಸಾಗುತ್ತಿದೆ ಎಂದು ಗುರುವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು, ಭಗವಾನ್ ಬುದ್ಧರ ಬೋಧನೆಗಳು ಈ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ ಎಂದು ಪ್ರತಿಪಾದಿಸಿದರು.
ಇಂದಿಲ್ಲಿ ಆರಂಭಗೊಂಡ ಎರಡು ದಿನಗಳ ಜಾಗತಿಕ ಬೌದ್ಧ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,ಜನರು ಮತ್ತು ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳೊಂದಿಗೆ ಜಾಗತಿಕ ಹಿತಾಸಕ್ತಿಗಳಿಗೂ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ. ಬಡವರು ಮತ್ತು ಸಂಪನ್ಮೂಲಗಳ ಕೊರತೆಯಿರುವ ರಾಷ್ಟ್ರಗಳ ಬಗ್ಗೆ ಜಗತ್ತು ಯೋಚಿಸಬೇಕಿದೆ ಎಂದು ಹೇಳಿದರು.
ಬುದ್ಧರು ತೋರಿಸಿದ್ದ ದಾರಿಯಲ್ಲಿ ಭಾರತವು ಸಾಗುತ್ತಿದೆ ಎಂದು ಪ್ರತಿಪಾದಿಸಿದ ಮೋದಿ,ಅದು ಪ್ರತಿಯೊಬ್ಬ ಮಾನವನ ನೋವನ್ನು ತನ್ನದೆಂದು ಪರಿಗಣಿಸಿದೆ ಎಂದರು. ಭೂಕಂಪಪೀಡಿತ ಟರ್ಕಿ ಸೇರಿದಂತೆ ಇತರರ ನೆರವಿಗೆ ಭಾರತವು ಧಾವಿಸಿದ್ದನ್ನು ಅವರು ಉಲ್ಲೇಖಿಸಿದರು.
ಬುದ್ಧರ ವಿಚಾರಗಳನ್ನು ಪ್ರಚಾರ ಮಾಡಲು ಹಾಗೂ ಗುಜರಾತಿನಲ್ಲಿಯ ತನ್ನ ಜನ್ಮಸ್ಥಳ ಮತ್ತು ತನ್ನ ಲೋಕಸಭಾ ಕ್ಷೇತ್ರ ವಾರಣಾಸಿ ಜೊತೆ ಬೌದ್ಧಧರ್ಮದ ಆಳವಾದ ಸಂಬಂಧಗಳನ್ನು ಎತ್ತಿ ತೋರಿಸಲು ತನ್ನ ಸರಕಾರವು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದೂ ಮೋದಿ ನುಡಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ ಸಹಯೋಗದೊಂದಿಗೆ ಶೃಂಗಸಭೆಯನ್ನು ಆಯೋಜಿಸಿದೆ.







