ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ: ಹೈಕೋರ್ಟ್ ಅಸಮಾಧಾನ
ಪ್ರಕಟನೆ ಹೊರಡಿಸಿದ್ದರೂ ಸ್ಮಶಾನ ಭೂಮಿಗಾಗಿ ಅರ್ಜಿ ಸಲ್ಲಿಸದ ಸಾರ್ವಜನಿಕರು:

ಬೆಂಗಳೂರು, ಎ.20: ಸಾರ್ವಜನಿಕ ಪ್ರಕಟನೆ ಹೊರಡಿಸಿದ್ದರೂ ರಾಜ್ಯದ ಯಾವೊಂದು ಭಾಗದಿಂದಲೂ ಸ್ಮಶಾನ ಭೂಮಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿಯಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರಿನ ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜನರ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿ ವಿಚಾರಣೆ ವೇಳೆ ಸರಕಾರಿ ವಕೀಲ ಕಿರಣ್ ಕುಮಾರ್, 2023ರ ಎ.19ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒದಗಿಸಿರುವ ಪತ್ರ ಒಳಗೊಂಡ ಮೆಮೋವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 2023ರ ಎ.9ರಂದು ಹೈಕೋರ್ಟ್ ಹೊರಡಿಸಿದ ಆದೇಶದಂತೆ ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಕ್ಕೆ ಭೂಮಿ ಮಂಜೂರಾತಿ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ತಿಳಿಸಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಆದರೆ, ಸಾರ್ವಜನಿಕ ಪ್ರಕಟಣೆ ಪ್ರಕಟಿಸಿದ ಹೊರತಾಗಿಯೂ ಇಡೀ ರಾಜ್ಯದ ಯಾವುದೇ ಭಾಗದಿಂದಲೂ ಯಾವೊಬ್ಬ ಗ್ರಾಮಸ್ಥನಿಂದಲೂ ಸ್ಮಶಾನಕ್ಕೆ ಭೂಮಿ ಮಂಜೂರಾತಿ ಕೋರಿ ಮನವಿ ಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಇದಕ್ಕೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಜನರಿಗೆ ಸ್ಮಶಾನಕ್ಕೆ ಭೂಮಿ ಸೇರಿ ಇತರೆ ಸೌಲಭ್ಯ ಪಡೆಯುವುದರ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಚುನಾವಣೆ ವಿಚಾರವಾಗಿ ಹೆಚ್ಚಿನ ಗಮನ ಹರಿಸುತ್ತಾರೆ. ಹಣ ಸ್ವೀಕರಿಸಿ ಮತ ಹಾಕಬೇಕಲ್ಲವೇ? ಅದುವೇ ಜನರಿಗೆ ಇಷ್ಟದ ವಿಷಯ. ಜನ ಹೀಗಿರುವಾಗ ನ್ಯಾಯಾಲಯ ಏನು ಮಾಡಲು ಸಾಧ್ಯ ಎಂದಿದೆ.
ಅರ್ಜಿದಾರ ವಕೀಲ ಮೊಹಮ್ಮದ್ ಇಕ್ಬಾಲ್, ಸರಕಾರವು 2023ರ ಎ.20 ವರೆಗೆ ರಾಜ್ಯದ ಯಾವೆಲ್ಲಾ ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿ ಸರಕಾರ ಕಲ್ಪಿಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರಿಗೆ ಮೇ 23 ರವರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.







