ವಕೀಲರು ಮುಷ್ಕರ ನಡೆಸುವಂತಿಲ್ಲ, ನ್ಯಾಯಾಲಯದ ಕೆಲಸಗಳಿಂದ ಹೊರಗುಳಿಯುವಂತಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ. 20: ವಕೀಲರು ಮುಷ್ಕರ ನಡೆಸುವಂತಿಲ್ಲ ಅಥವಾ ನ್ಯಾಯಾಲಯದ ಕೆಲಸಗಳಿಂದ ದೂರ ಉಳಿಯುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಗುರುವಾರ ಹೆಳಿದೆ. ಅದೇ ವೇಳೆ, ವಕೀಲರು ತಮ್ಮ ನೈಜ ಸಮಸ್ಯೆಗಳಿಗೆ ಪರಿಹಾರ ಕೋರಲು ಸಾಧ್ಯವಾಗುವಂತೆ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ರಾಜ್ಯ ಮಟ್ಟದ ದೂರು ಪರಿಹಾರ ಸಮಿತಿಗಳನ್ನು ರಚಿಸುವಂತೆ ಎಲ್ಲಾ ಹೈಕೋರ್ಟ್ ಗಳಿಗೆ ನಿರ್ದೇಶನ ನೀಡಿದೆ.
ಜಿಲ್ಲಾ ನ್ಯಾಯಾಲಯ ಮಟ್ಟದಲ್ಲೂ ಪ್ರತ್ಯೇಕ ದೂರು ಪರಿಹಾರ ಸಮಿತಿಗಳನ್ನು ರಚಿಸಬೇಕು ಹಾಗೂ ಇಲ್ಲಿ ಮೊಕದ್ದಮೆಗಳ ದಾಖಲಾತಿ ಅಥವಾ ವಿಚಾರಣೆಗೆ ದಿನಾಂಕ ನಿಗದಿಗೆ ಸಂಬಂಧಿಸಿದ ವಿಧಾನಗಳಲ್ಲಿ ಆಗುವ ಬದಲಾವಣೆಗಳು ಮತ್ತು ಅಥವಾ ನ್ಯಾಯಾಧೀಶರ ದುರ್ವರ್ತನೆಗೆ ಸಂಬಂಧಿಸಿದ ನೈಜ ದೂರುಗಳಿಗೆ ವಕೀಲರು ಪರಿಹಾರ ಕೋರಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಮ್.ಆರ್. ಶಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ತಮ್ಮ ದೂರುಗಳ ಪರಿಹಾರಕ್ಕೆ ಸೂಕ್ತ ವೇದಿಕೆಯೊಂದನ್ನು ರಚಿಸುವಂತೆ ಕೋರಿ ಡೆಹ್ರಾಡೂನ್ ಜಿಲ್ಲಾ ವಕೀಲರ ಸಂಘವು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.





