ಮಂಗಳೂರು ಕೆಥೊಲಿಕ್ ಧರ್ಮಕ್ಷೇತ್ರ: ಮೂವರು ಯಾಜಕ ಉಮೇದ್ವಾರರಿಗೆ ಗುರುದೀಕ್ಷೆ

ಮಂಗಳೂರು: ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದ್ಡಾನ್ಹಾ ಅವರು ನಗರದ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಗುರುವಾರ ಮೂವರು ಯಾಜಕ ಉಮೇದ್ವಾರಾರಿಗೆ ಯಾಜಕ ದೀಕ್ಷೆ ನೀಡಿದರು.
ಕಾಟಿಪಳ್ಳ ಚರ್ಚಿನ ವಂದನೀಯ ಅವಿನಾಶ್ ಲೆಸ್ಲಿ ಪಾಯ್ಸ್, ವೇಣೂರು ಚರ್ಚಿನ ವಂದನೀಯ ಲೋಹಿತ್ ಅಜಯ್ ಮಸ್ಕರೇನ್ಹಸ್, ಮತ್ತು ನೀರುಡೆ ಚರ್ಚಿನ ವಂದನೀಯ ರಾಬಿನ್ ಜಾಯ್ಸನ್ ಸಾಂತುಮಾಯರ್ ನೂತನವಾಗಿ ದೀಕ್ಷೆ ಸ್ವೀಕರಿಸಿದರು.
ನವಯಾಜಕರಲ್ಲಿ ಒಬ್ಬರಾದ ವಂದನೀಯ ರಾಬಿನ್ ಸಾಂತು ಮಾಯರ್ ಮಾತನಾಡಿ ನನ್ನ ಜೀವನದ ಈ ಮಹತ್ತರ ದಿನಕ್ಕೆ ಸಾಕ್ಷಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಯಾಜಕಾಭಿಷೇಕ ನನ್ನ ಜೀವನದಲ್ಲಿ ನಾನು ಪಡೆದ ದೊಡ್ಡ ವರವಾಗಿದೆ. ನನ್ನನ್ನು ತನ್ನದಾಗಿಸಿಕೊಂಡ ಸರ್ವಶಕ್ತನಿಗೆ ಕೋಟ್ಯಂತರ ಧನ್ಯವಾದಗಳು. ನನ್ನ ಸಹ ದೀಕ್ಷೆ ಪಡೆದ ಯಾಜಕರೊಂದಿಗೆ ಬಿಷಪ್ ಮತ್ತು ಸಮಸ್ತ ಧರ್ಮಕ್ಷೇತ್ರಕ್ಕೆ ನಾನು ಕೃತಜ್ಞರಾಗಿರುತ್ತೇನೆ. ನನ್ನ ಸಂಪೂರ್ಣಜೀವನವನ್ನು ಯೇಸುವಿಗೆ ಮುಡಿಪಾಗಿಸುತ್ತೇನೆ ಎಂದರು.
ಜೆಪ್ಪು ಸಂತ ಜೋಸೆಫ್ ಸೆಮಿನರಿ ಪ್ರಾಧ್ಯಾಪಕ ವಂದನೀಯ ಡಾ.ರಾಜೇಶ್ ರೊಸಾರಿಯೊ ನೂತನವಾಗಿ ದೀಕ್ಷೆ ಪಡೆದ ಯಾಜಕರನ್ನು ಅಭಿನಂದಿಸಿದರು.
ಮಂಗಳೂರು ಧರ್ಮಕ್ಷೇತ್ರದ ಸಮಸ್ತರು ಹೊಸದಾಗಿ ದೀಕ್ಷೆ ಪಡೆದ ಈ ಮೂವರು ನವ ಯಾಜಕರೊಂದಿಗೆ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಧರ್ಮಕ್ಷೇತ್ರದ ಶ್ರೇಷ್ಠಗುರು ಮ್ಯಾಕ್ಸಿಮ್ ಎಲ್. ನೊರೊನ್ಹಾ, ಕುಲಾಧಿಪತಿ ಅತಿ ವಂದನೀಯ ಡಾ. ವಿಕ್ಟರ್ ಜಾಜ್ ಡಿಸೋಜ, ಸೆಮಿನರಿ ರೆಕ್ಟರ್ ಅತೀ ವಂದನೀಯ ಡಾ. ರೊನಾಲ್ಡ್ ಸೆರಾವೊ, ಕ್ಯಾಥೆಡ್ರಲ್‌ನ ರೆಕ್ಟರ್ ವಂದನೀಯ ಆಲ್ಫ್ರೆಡ್ ಜೆ. ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.