ಆಂಧ್ರಪ್ರದೇಶ: ಅಬ್ದುಲ್ ಕಲಾಂ ವ್ಯೂ ಪಾಯಿಂಟ್ ಮರುನಾಮಕರಣಕ್ಕೆ ಪ್ರತಿಪಕ್ಷಗಳ ತೀವ್ರ ಖಂಡನೆ

ವಿಶಾಖಪಟ್ಟಣ,ಎ.20: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಅಬ್ದುಲ್ ಕಲಾಂ ವ್ಯೂ ಪಾಯಿಂಟ್ ಅನ್ನು ವೈಎಸ್ಆರ್ ವ್ಯೂ ಪಾಯಿಂಟ್ ಎಂದು ಮರುನಾಮಕರಣಗೊಳಿಸುವ ವೈ.ಎಸ್.ಆರ್.ಜಗನ್ ಸರಕಾರದ ನಡೆಯು ರಾಜ್ಯದ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪರಂಪರೆಯನ್ನು ಜಗನ್ ಸರಕಾರವು ಅವಮಾನಿಸಿದೆೆಯೆಂದು ಆಂಧ್ರಪ್ರದೇಶದ ಹಲವಾರು ಪ್ರತಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಪಿಜೆ ಅಬ್ದುಲ್ ಕಲಾಂ ವ್ಯೆ ಪಾಯಿಂಟ್ ಅನ್ನು ವೈಎಸ್ಆರ್ ವ್ಯೂ ಪಾಯಿಂಟ್ ಅನ್ನು ಎಂದು ಮರುನಾಮಕರಣ ಮಾಡುವ ಜಗನ್ ಸರಕಾರದ ನಿರ್ಧಾರವು ಆಡಳತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರದ ಕಿಡಿಯನ್ನು ಹೊತ್ತಿಸಿದೆ.
ತೆಲುಗುದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ‘‘ಹೆಸರುಗಳನ್ನು ಬದಲಾಯಿಸುವ ಮೂಲಕ ಹಿಂಸಾನಂದ ಪಡೆಯುವ ಮನೋರೋಗ ಇದಾಗಿದೆಯೇ?. ಜನತೆಯ ಅಪಾರ ಪ್ರೀತಿಗೆ ಪಾತ್ರರಾಗಿದ್ದ, ಪ್ರಾಮಾಣಿಕತೆ,ಶಿಸ್ತು ಹಾಗೂ ಕರ್ತವ್ಯನಿಷ್ಠೆಯ ಸಾಕಾರರೂಪವಾಗಿದ್ದ ಮಾಜಿ ರಾಷ್ಟ್ರಪತಿಗೆ ಮಾಡಿದ ಅಪಮಾನ ಇದಾಗಿದೆ’’ಎಂದು ಹೇಳಿದ್ದಾರೆ.
ಆದಾಗ್ಯೂ ತನ್ನ ಸರಕಾರದ ನಡೆಯನ್ನು ವೈಎಸ್ಆರ್ ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ರಾಜ್ಯದ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸುವ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಇದಾಗಿದೆ ಎಂದು ಅದು ಹೇಳಿದೆ.







