ಬಂಟ್ವಾಳ : ರಮಾನಾಥ ರೈ ಆಸ್ತಿ ವಿವರ ಘೋಷಣೆ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ 9ನೇ ಬಾರಿ ಸ್ಪರ್ಧಾ ಕಣಕ್ಕೆ ಧುಮುಕಿರುವ ಮಾಜಿ ಸಚಿವ ಬಿ. ರಮಾನಾಥ ರೈ 5.15 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ರಿಟರ್ನಿಂಗ್ ಅಧಿಕಾರಿಯ ಮುಂದೆ ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡಾವಿಟ್‌ನಲ್ಲಿ 36.25 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 4.79 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಪತ್ನಿ ಧನಭಾಗ್ಯ ಯಾನೆ ಶೈಲಾ ಆರ್ ರೈ ಅವರು 1 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದರೆ, ಪುತ್ರಿ ಚರಿಷ್ಮಾ ರೈ ಹೆಸರಲ್ಲಿ 99.04 ಲಕ್ಷ ರೂ. ಮತ್ತು ಪುತ್ರ ಚೈತ್ರದೀಪ್ ರೈ ಹೆಸರಲ್ಲಿ 25.85 ಲಕ್ಷ ರೂ. ಮೌಲ್ಯದ ಚರಾಸ್ತಿ ಗಳಿವೆ.
ರೈ ಕುಟಂಬದಲ್ಲಿ 9 ವಾಹನ: ರಮಾನಾಥ ರೈ ಕುಟುಂಬದಲ್ಲಿ 9 ವಾಹನಗಳು ಇವೆ. ರೈ ಹೆಸರಿನಲ್ಲಿ ಇನೋವಾ, ಟೊಯೇಟೊ ಮತ್ತು ಟಾಟಾ ಟಿಯಾಗೋ ಎಕ್ಸ್ ಝೆಡ್ ವಾಹನ ಇದೆ. ಪತ್ನಿ ಮತ್ತು ಪುತ್ರನ ಬಳಿ ವಾಹನ ಇಲ್ಲ. ಆದರೆ ಪುತ್ರಿ ಚರಿಷ್ಮಾ ಬಳಿ 7 ವಾಹನಗಳಿವೆ.
ರೈ ಅವರಲ್ಲಿ 6.15 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನ ಮತ್ತು 77 ಸಾವಿರ ರೂ. ಮೌಲ್ಯದ 1,000 ಗ್ರಾಂ ಬೆಳ್ಳಿ, ಪತ್ನಿ 72.73 ಲಕ್ಷ ರೂ. ಮೌಲ್ಯದ 1,300 ಗ್ರಾಂ ಚಿನ್ನ ಮತ್ತು 38,500 ಮೌಲ್ಯದ 500 ಗ್ರಾಂ ಬೆಳ್ಳಿ, ಪುತ್ರಿ ಬಳಿ 22.38 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ, 19,250 ರೂ. ಮೌಲ್ಯದ 250 ಗ್ರಾಂ ಬೆಳ್ಳಿ, ಪುತ್ರ ಬಳಿ 5.59 ಲಕ್ಷ ರೂ.ಮೌಲ್ಯದ 100 ಗ್ರಾಂ ಚಿನ್ನ ಮತ್ತು 7,700ರೂ. ಮೌಲ್ಯದ ಬೆಳ್ಳಿ ಇವೆ.
ಕುಟುಂಬದ ಸಾಲ 7.63 ಕೋಟಿ ರೂ.: ರೈ 2.03 ಕೋಟಿ ರೂ, ಪತ್ನಿ 5.10 ಕೋಟಿ ರೂ ಮತ್ತು ಪುತ್ರಿ 50.50 ಲಕ್ಷ ರೂ. ಸಾಲದಲ್ಲಿದ್ದಾರೆ. ವಾರ್ಷಿಕ ಆದಾಯ 2021-22ರಲ್ಲಿ ರೈ ಅವರದ್ದು 22.15 ಲಕ್ಷ ರೂ, ಧನಭಾಗ್ಯ ರೈ 4.88 ಲಕ್ಷ ರೂ. ಮತ್ತು ಚರಿಷ್ಮಾ ರೈ 9.29 ಲಕ್ಷ ರೂ.
ಒಂದು ಪ್ರಕರಣ : 2018ರ ಚುನಾವಣೆ ವೇಳೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕರಿಗೆ ಹಣ ಹಂಚಲು ಹಣ ಸಂಗ್ರಹಿಸಿಟ್ಟ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.