ಮತ್ತೆ ಬರಲಿದೆ ಎಲ್ನಿನೊ: ತಾಪಮಾನ ದಾಖಲೆಯ ಮಟ್ಟಕ್ಕೇರುವ ಸಾಧ್ಯತೆ; ವಿಜ್ಞಾನಿಗಳ ಎಚ್ಚರಿಕೆ

ಬ್ರಸೆಲ್ಸ್, ಎ.20: ಹವಾಮಾನ ಬದಲಾವಣೆ ಹಾಗೂ ಎಲ್ನಿನೊ ವಾಪಸಾತಿಯಿಂದ 2023 ಅಥವಾ 2024ರಲ್ಲಿ ಜಾಗತಿಕ ಸರಾಸರಿ ತಾಪಮಾನ ದಾಖಲೆಯ ಮಟ್ಟಕ್ಕೇರಲಿದೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಜಾಗತಿಕ ತಾಪಮಾನವನ್ನು ಸ್ವಲ್ಪ ಕಡಿಮೆ ಮಾಡುವ ಪೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಹವಾಮಾನ ಮಾದರಿಯ ಮೂರು ವರ್ಷಗಳ ನಂತರ, ಈ ವರ್ಷಾಂತ್ಯಕ್ಕೆ ಜಗತ್ತಿಗೆ ಎಲ್ನಿನೊ ವಿದ್ಯಮಾನ ಮರುಕಳಿಸಲಿದೆ ಎಂದು ಯುರೋಪಿಯನ್ ಯೂನಿಯನ್ನ ಕಾಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್ನ ನಿರ್ದೇಶಕ ಕಾರ್ಲೊ ಬೌಂಟೆಂಪೊ ಹೇಳಿದ್ದಾರೆ.
ಎಲ್ನಿನೊ ಸಮಯದಲ್ಲಿ ಸಮಭಾಜಕದ ಉದ್ದಕ್ಕೂ ಪಶ್ಚಿಮಕ್ಕೆ ಬೀಸುವ ಗಾಳಿಯು ನಿಧಾನಗೊಳ್ಳುತ್ತದೆ ಮತ್ತು ಬೆಚ್ಚಗಿನ ನೀರು ಪೂರ್ವಕ್ಕೆ ತಳ್ಳಲ್ಪಡುವುದರಿಂದ ಬೆಚ್ಚಗಿನ ಮೇಲ್ಮೈ ಸಾಗರ ತಾಪಮಾನ ಸೃಷ್ಟಿಯಾಗುತ್ತದೆ. ‘ಸಾಮಾನ್ಯವಾಗಿ ಎಲ್ನಿನೊ ಜಾಗತಿಕ ಮಟ್ಟದಲ್ಲಿ ದಾಖಲೆ ಮುರಿಯುವ ತಾಪಮಾನದೊಂದಿಗೆ ಸಂಭವಿಸುತ್ತದೆ.
ಇದು 2023 ಅಥವಾ 2024ರಲ್ಲಿ ಸಂಭವಿಸುತ್ತದೆಯೋ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಬೊರಿಯಲ್ ಬೇಸಿಗೆಯ ಅಂತ್ಯದಲ್ಲಿ ಎಲ್ನಿನೊ ಪರಿಸ್ಥಿತಿ ಮರಳುವುದನ್ನು ಹವಾಮಾನ ಮಾದರಿಗಳು ಸೂಚಿಸುತ್ತವೆ ಮತ್ತು ವರ್ಷದ ಅಂತ್ಯದಲ್ಲಿ ಪ್ರಬಲ ಎಲ್ನಿನೊ ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ ’ ಎಂದು ಕಾರ್ಲೊ ಬೌಂಟೆಂಪೊ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅತ್ಯಧಿಕ ತಾಪಮಾನ 2016ರಲ್ಲಿ ದಾಖಲಾಗಿದ್ದು ಆ ವರ್ಷವೂ ಎಲ್ನಿನೊ ರೂಪುಗೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಎಲ್ನಿನೊ ಇಲ್ಲದೆಯೂ ತಾಪಮಾನ ಗರಿಷ್ಟಮಟ್ಟಕ್ಕೇರುವ ಸಂದರ್ಭ ಹಲವು ಬಾರಿ ಬಂದಿದೆ.
ಕಳೆದ ಎಂಟು ವರ್ಷಗಳು ವಿಶ್ವದ 8 ಅತ್ಯಂತ ಗರಿಷ್ಟ ತಾಪಮಾನದ ವರ್ಷಗಳಾಗಿದ್ದು ಇದು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ನಡೆಸಲ್ಪಡುವ ದೀರ್ಘಾವಧಿಯ ತಾಪಮಾನ ಏರಿಕೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಒಂದು ವೇಳೆ ಎಲ್ನಿನೊ ರೂಪುಗೊಂಡರೆ 2023ರ ವರ್ಷವು 2016ಕ್ಕಿಂತಲೂ ಅಧಿಕ ಬಿಸಿಯಾಗಲಿದೆ.
ಮನುಷ್ಯರು ಪಳೆಯುಳಿಕೆ ಇಂಧನ ಸುಡುವುದನ್ನು ಮುಂದುವರಿಸುವವರೆಗೂ ಜಾಗತಿಕ ತಾಪಮಾನ ಗರಿಷ್ಟ ಮಟ್ಟದಲ್ಲೇ ಮುಂದುವರಿಯಲಿದೆ ಎಂದು ಲಂಡನ್ನ ಇಂಪೀರಿಯಲ್ ಕಾಲೇಜಿನ ಹಿರಿಯ ಉಪನ್ಯಾಸಕ ಫ್ರೆಡೆರಿಕ್ ಓಟ್ಟೊ ಹೇಳಿದ್ದಾರೆ.