10 ಜಿಲ್ಲೆಗಳಲ್ಲಿ ಸರಕಾರಿ ಯೋಜನೆಗಳಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ತಾರತಮ್ಯ: ಸ್ಪೆಕ್ಟ್ ಫೌಂಡೇಷನ್ ವರದಿ

ಹೊಸದಿಲ್ಲಿ,ಎ.20: ವಿವಿಧ ರಾಜ್ಯಗಳಲ್ಲಿಯ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ 10 ಜಿಲ್ಲೆಗಳಲ್ಲಿ ಸರಕಾರಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ವ್ಯವಸ್ಥಿತ ತಾರತಮ್ಯ ನಡೆಯುತ್ತಿದೆ ಎಂದು ಲಾಭೇತರ ಸಂಸ್ಥೆ ಸ್ಪೆಕ್ಟ್ ಫೌಂಡೇಷನ್ ನ ವರದಿಯು ಬೆಟ್ಟು ಮಾಡಿದೆ. ದೇಶದ ಇತರ ಪ್ರದೇಶಗಳಿಗೆ ಹೋಲಿಸಿದರೆ ಈ ಹತ್ತು ಜಿಲ್ಲೆಗಳಲ್ಲಿನ ಮುಸ್ಲಿಂ ಸಮುದಾಯವು ಮೂಲಸೌಕರ್ಯಗಳಿಂದ ಹೆಚ್ಚು ವಂಚಿತವಾಗಿದೆ ಎನ್ನುವುದನ್ನೂ ವರದಿಯು ಬಹಿರಂಗಗೊಳಿಸಿದ್ದು,ಇದು ಮುಸ್ಲಿಮ್ ತುಷ್ಟೀಕರಣ ಮಿಥ್ಯೆಯ ಕುರಿತು ಪ್ರಶ್ನೆಯನ್ನು ಹುಟ್ಟು ಹಾಕಿದೆ ಎಂದು newsclick.in ವರದಿ ಮಾಡಿದೆ.
10 ಜಿಲ್ಲೆಗಳಲ್ಲಿಯ ಮುಸ್ಲಿಮರ ಸಾಮಾಜಿಕ ಆರ್ಥಿಕ ಹಿಂದುಳಿದಿರುವಿಕೆಯ ಬಗ್ಗೆ ಗಮನ ಹರಿಸಿರುವ ಸ್ಪೆಕ್ಟ್ ಫೌಂಡೇಷನ್ ವರದಿಯನ್ನು ಇತ್ತೀಚಿಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಬಿಡುಗಡೆಗೊಳಿಸಲಾಗಿದೆ.
ಸಮೀಕ್ಷೆಗಾಗಿ ಆಯ್ದುಕೊಳ್ಳಲಾಗಿದ್ದ 10 ಜಿಲ್ಲೆಗಳಲ್ಲಿ ಒಟ್ಟು ಜನಸಂಖ್ಯೆಯ ಶೇ.52ರಷ್ಟು ಅಂದರೆ ಸುಮಾರು 1.41 ಕೋಟಿ ಮುಸ್ಲಿಮರಿದ್ದಾರೆ. ಈ ಜಿಲ್ಲೆಗಳನ್ನು ಜನಸಂಖ್ಯಾ ಸ್ಫೋಟ ಮತ್ತು ನೆರೆಯ ದೇಶಗಳಲ್ಲಿ ಅಕ್ರಮ ನುಸುಳುವಿಕೆ ಆರೋಪ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಿಜೆಪಿಯು ಗುರಿಯಾಗಿಸಿಕೊಂಡಿರುವುದೂ ಅವುಗಳ ಆಯ್ಕೆಗೆ ಕಾರಣವಾಗಿದೆ.
ಬಿಹಾರದ ಅರಾರಿಯಾ, ಪುರ್ನಿಯಾ, ಕಿಶನಗಂಜ್ ಮತ್ತು ಕಥಿಹಾರ್, ಅಸ್ಸಾಮಿನ ಧುಬ್ರಿ ಮತ್ತು ಕೊಕ್ರಾಝಾರ್, ಉತ್ತರ ಪ್ರದೇಶದ ಶ್ರಾವಸ್ತಿ ಮತ್ತು ಬಲರಾಮಪುರ ಹಾಗೂ ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಮುರ್ಷಿದಾಬಾದ್ ಸಮೀಕ್ಷೆಗಾಗಿ ಆಯ್ಕೆ ಮಾಡಲಾಗಿದ್ದ 10 ಜಿಲ್ಲೆಗಳಾಗಿವೆ.
ಬಿಹಾರದ ನಾಲ್ಕು ಜಿಲ್ಲೆಗಳಲ್ಲಿಯ ಪ್ರಾಥಮಿಕ ಅಭಿವೃದ್ಧಿಯ ಮಾನದಂಡಗಳು ಹೀನಾಯ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಬಿಂಬಿಸಿವೆ. ಈ ಜಿಲ್ಲೆಗಳಲ್ಲಿ ಸಾಕ್ಷರತೆ ದರವು ರಾಜ್ಯದ ಸರಾಸರಿಗಿಂತ ಕಡಿಮೆಯಿದೆ. ಅಲ್ಲದೆ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕ ಅನುಪಾತವು ರಾಜ್ಯದ ಸರಾಸರಿಗಿಂತ ತುಂಬ ಹೆಚ್ಚಾಗಿದ್ದು, ಹೀನಾಯ ಶಿಕ್ಷಣ ಮೂಲಸೌಕರ್ಯವನ್ನು ಬೆಟ್ಟು ಮಾಡಿದೆ.
ಈ ಎಲ್ಲ ನಾಲ್ಕೂ ಜಿಲ್ಲೆಗಳು ಕಡಿಮೆ ಆದಾಯದ ಜನಸಂಖ್ಯೆಯನ್ನು ಹೊಂದಿದ್ದು, ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಕೇವಲ ಶೇ.31.20ರಷ್ಟು ಫಲಾನುಭವಿಗಳು ಮುಸ್ಲಿಮರಾಗಿದ್ದಾರೆ. ಇದು ಮುಸ್ಲಿಮ್ ಜನಸಂಖ್ಯೆಯ ಒಟ್ಟು ಸರಾಸರಿಗಿಂತ ಶೇ.17.5ರಷ್ಟು ಕಡಿಮೆಯಾಗಿದೆ. ಸಾಮಾಜಿಕ ಆರ್ಥಿಕ ಹಿಂದುಳಿದಿರುವಿಕೆಯು ನರೇಗಾ ಯೊಜನೆಯ ಅಂಕಿಅಂಶಗಳಲ್ಲಿ ಇನ್ನೂ ಹೆಚ್ಚು ಪ್ರತಿಫಲಿಸಿದೆ. 2014-15 ಮತ್ತು 2020-21ರ ನಡುವೆ ಈ ಪ್ರದೇಶದಲ್ಲಿ ಯೋಜನೆಯಡಿ ಕೆಲಸಕ್ಕೆ ಭಾರೀ ಬೇಡಿಕೆಯಿತ್ತು ಮತ್ತು ಕೋವಿಡ್ ಸಾಂಕ್ರಾಮಿಕ ಸ್ಥಿತಿಯಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿತ್ತು.
ವರದಿಯು ಉ.ಪ್ರದೇಶದ ಎರಡು ಜಿಲ್ಲೆಗಳಲ್ಲಿ ಮುಸ್ಲಿಮರಲ್ಲಿ ಜನಸಂಖ್ಯಾ ಸ್ಫೋಟದ ಮಿಥ್ಯೆಯನ್ನು ಬಯಲಿಗೆಳೆದಿದೆ. 2001-11ರ ನಡುವೆ ಶ್ರಾವಸ್ತಿಯಲ್ಲಿ ದಶಕದ ಜನಸಂಖ್ಯಾ ಬೆಳವಣಿಗೆ (ಡಿಪಿಜಿ) -5.02 ಶೇ.ದಷ್ಟಿತ್ತು. ಅದು ಹಿಂದಿನ ದಶಕದಲ್ಲಿ 32.23 ಶೇ.ದಷ್ಟು ಇಳಿಕೆಯನ್ನು ಕಂಡಿದೆ. ಬಲರಾಮಪುರದಲ್ಲಿ ಡಿಪಿಜಿಯು ಏರಿಕೆಯನ್ನು ಕಂಡಿದ್ದು,ಇದು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಲ್ಪವಾಗಿದೆ.
ಬಲರಾಮಪುರ ಮತ್ತು ಶ್ರಾವಸ್ತಿ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣವು ಇತರ ಜಿಲ್ಲೆಗಳಿಗಿಂತ ಕಡಿಮೆಯಾಗಿದೆ. ಶ್ರಾವಸ್ತಿಯಲ್ಲಿ ಆರೋಗ್ಯ ಮೂಲಸೌಕರ್ಯಗಳೂ ಕಡಿಮೆಯಿದ್ದು,ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳ ಪೈಕಿ ಹೀನಾಯ ಸ್ಥಿತಿಯಲ್ಲಿದೆ.
ಅತ್ತ ಅಸ್ಸಾಮಿನ ಧುಬ್ರಿ ಮತ್ತು ಕೊಕ್ರಝಾರ್ ಜಿಲ್ಲೆಗಳಲ್ಲಿ ಮೂಲಸೌಕರ್ಯ ಮತ್ತು ಆರೋಗ್ಯ ರಕ್ಷಣೆ ಸ್ಥಿತಿ ಎರಡೂ ಕಳಪೆ ಸ್ಥಿತಿಯಲ್ಲಿವೆ. ಕೊಕ್ರಝಾರ್ನಲ್ಲಿ ಕ್ರಿಯಾತ್ಮಕ ಪ್ರಾಥಮಿಕ ಶಾಲೆಗಳ ಸಂಖ್ಯೆ ಕ್ಷೀಣಿಸಿದೆ. ಜಿಲ್ಲೆಯಲ್ಲಿ ವಿವಿಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಲಸೆ ಹೋಗುವ ಸ್ಥಿತಿಯಿದೆ.
ಪ.ಬಂಗಾಳದ ಮಾಲ್ಡಾ (ಶೇ.51) ಮತ್ತು ಮುರ್ಷಿದಾಬಾದ್ (ಶೇ.66) ಮುಸ್ಲಿಮರ ಬಾಹುಳ್ಯವನ್ನು ಹೊಂದಿವೆ. ‘ನೆರೆಯ ಬಾಂಗ್ಲಾದೇಶದಿಂದ ನುಸುಳುವಿಕೆಯಿಂದಾಗಿ ಜನಸಂಖ್ಯೆ ಹೆಚ್ಚುತ್ತಿರುವುದಕ್ಕಾಗಿ’ ಈ ಜಿಲ್ಲೆಗಳು ಬಿಜೆಪಿಯ ದಾಳಿಗೆ ಗುರಿಯಾಗಿವೆ. ಇವೆರಡೂ ಜಿಲ್ಲೆಗಳು ಋಣಾತ್ಮಕ ದಶಕದ ಜನಸಂಖ್ಯಾ ಬೆಳವಣಿಗೆಯನ್ನು ಕಂಡಿವೆ ಎನ್ನುವುದನ್ನು ವರದಿಯು ತೋರಿಸಿದೆ,ತನ್ಮೂಲಕ ಬಿಜೆಪಿಯ ಪ್ರಚಾರ ಸುಳ್ಳು ಎಂದು ಸೂಚಿಸಿದೆ ಎಂದು newsclick.in ವರದಿ ಮಾಡಿದೆ.







