ಕೆಜಿಎಫ್ ಬಾಬು ನಿವಾಸದಲ್ಲಿ ವೋಟರ್ ಐಡಿ ಪತ್ತೆ: FIR ದಾಖಲು

ಬೆಂಗಳೂರು, ಎ.20: ರಿಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು ಮನೆಯ ಮೇಲೆ ಆದಾಯ ತೆರಿಗೆ ಹಾಗೂ ಪೊಲೀಸರು ದಾಳಿ ನಡೆಸಿದಾಗ ವೋಟರ್ ಐಡಿಗಳು ಪತ್ತೆಯಾದ ಹಿನ್ನೆಲೆ ಇಲ್ಲಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕೆಜಿಎಫ್ ಬಾಬು ಮನೆ ಮೇಲಿನ ದಾಳಿ ವೇಳೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1925 ವೋಟರ್ ಐಡಿಗಳು ಪತ್ತೆಯಾಗಿದ್ದವು. ಇದನ್ನು ಎಚ್ಡಿಎಫ್ಸಿ ಬ್ಯಾಂಕ್ ಖಾತೆಯ ಮೂಲಕ ಅಂಟಿಸಿ ಪ್ರತೀ ಚೆಕ್ನಲ್ಲಿ 5000 ರೂ. ನಮೂದು ಮಾಡಲಾಗಿದೆ. ಕೆಜಿಎಫ್ ಬಾಬು ಮನೆಯ ಮೊದಲ ಮಹಡಿಯ ಕೊಠಡಿಯೊಂದರಲ್ಲಿ ಬ್ಯಾಂಕಿನ ಚೆಕ್ ಹಾಗೂ ವೋಟರ್ ಐಡಿಗಳು ಪತ್ತೆಯಾಗಿವೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ, ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್ಗಳಲ್ಲಿದ್ದ ಸೀರೆ, ಚಿಕ್ಕಪೇಟೆಗೆ ಸಂಬಂಧಿಸಿದ ಮುದ್ರಣ ಪ್ರತಿಗಳು, ವ್ಯಾನ್ ಹುಸೇನ್ ಕಂಪೆನಿಯ 481 ಸೂಟ್ಗಳು ಪತ್ತೆಯಾಗಿದ್ದವು. ದಾಳಿ ವೇಳೆ ಈ ಎಲ್ಲಾ ವಸ್ತುಗಳು ಪತ್ತೆಯಾಗಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಶಿವಾಜಿನಗರ ವಲಯದ ಚುನಾವಣಾ ಉಸ್ತುವಾರಿ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆಜಿಎಫ್ ಬಾಬು ವಿರುದ್ಧ ಜನ ಪ್ರತಿನಿಧಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.