ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಕರೆತಂದ ಏರ್‌ಇಂಡಿಯಾ ಪೈಲಟ್: ಡಿಜಿಸಿಎಗೆ ದೂರು

ಹೊಸದಿಲ್ಲಿ: ದುಬೈನಿಂದ ದೆಹಲಿಗೆ ಫೆಬ್ರುವರಿ 27ರಂದು ಬಂದ ವಿಮಾನದ ಪೈಲಟ್ ತನ್ನ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಕರೆ ತರುವ ಮೂಲಕ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಸುರಕ್ಷಾ ಕ್ರಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಡಿಜಿಸಿಎಗೆ ವಿಮಾನದ ಇತರ ಸಿಬ್ಬಂದಿ ದೂರು ನೀಡಿದ್ದಾರೆ.
ಸ್ನೇಹಿತೆಯನ್ನು ಒಳಕ್ಕೆ ಕರೆತರುವ ಮುನ್ನ ಕಾಕ್‌ಪಿಟ್ ಆಕೆಯ ಸ್ವಾಗತಕ್ಕೆ ಸಜ್ಜಾಗಬೇಕು ಎಂದು ಕ್ಯಾಪ್ಟನ್ ಬಯಸಿದ್ದ ಹಾಗೂ ಆಕೆಗೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಆಹಾರ ಪೂರೈಸಲ ಸೂಚಿಸಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.
"ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಏರ್ ಇಂಡಿಯಾ ಸಮಿತಿ ರಚಿಸಿದೆ" ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಮಾರ್ಚ್ 3ರಂದು ಸಿಬ್ಬಂದಿ ದೂರು ಸಲ್ಲಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಏರ್‌ಇಂಡಿಯಾ ವಕ್ತಾರರು ನಿರಾಕರಿಸಿದ್ದಾರೆ. ಮಾರ್ಚ್ 3ರ ಬಳಿಕ ಇದೇ ಮೊದಲ ಬಾರಿಗೆ ವಿಮಾನದ ಸಿಬ್ಬಂದಿಯನ್ನು ಶುಕ್ರವಾರ ಡಿಜಿಸಿಎ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಎಐ 915 ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮುನ್ನವೇ ವಿವಾದ ಆರಂಭವಾಗಿತ್ತು. ಪೈಲಟ್‌ಗಳು ವರದಿ ಮಾಡಿಕೊಳ್ಳಬೇಕಾದ ಸಮಯ ಮೀರಿದ್ದರಿಂದ ಇತರ ಸಿಬ್ಬಂದಿ ಕಾಯಬೇಕಾಯಿತು. ಬಳಿಕ ಅವರನ್ನು ಭೇಟಿ ಮಾಡದೇ ಪೈಲಟ್‌ಗಳು ಮುಂದುವರಿದಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪೈಲಟ್‌ಗಳು ಪ್ರಯಾಣಿಕರ ಜತೆಗೆ ವಿಮಾನ ಏರಿದ್ದಾರೆ. ತನ್ನ ಸ್ನೇಹಿತೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಈ ವರ್ಗದಿಂದ ಮೇಲ್ದರ್ಜೆಗೇರಿಸುವ ಸಲುವಾಗಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಖಾಲಿ ಆಸನ ಇದ್ದರೆ ಮಾಹಿತಿ ನೀಡುವಂತೆ ಕ್ಯಾಪ್ಟನ್ ಕೇಳಿದ್ದರು. ಆದರೆ ಖಾಲಿ ಇಲ್ಲ ಎಂದು ಸಿಬ್ಬಂದಿ ಉತ್ತರಿಸಿದ್ದರು. ಬಳಿಕ ಕ್ಯಾಪ್ಟನ್ ತನ್ನ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಕರೆತಂದಿದ್ದು, ಆಕೆಗಾಗಿ ದಿಂಬು ತರುವಂತೆ ಸೂಚಿಸಿದ್ದರು. ಆಕೆ ಮೊದಲ ವೀಕ್ಷಕರ ಆಸನದಲ್ಲಿ ಕುಳಿತಿದ್ದರು ಎಂದು ದೂರು ನೀಡಲಾಗಿದೆ.







