ಸೇನಾ ಟ್ರಕ್ ಮೇಲಿನ ದಾಳಿಗೆ ಐವರು ಯೋಧರು ಹುತಾತ್ಮ: ಉಗ್ರರಿಗಾಗಿ ಬೃಹತ್ ಶೋಧ ಕಾರ್ಯಾಚರಣೆ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಸೇನಾ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ ಟ್ರಕ್‌ಗೆ ಎಲ್ಲಾ ಕಡೆಗಳಿಂದ ಎರಡು ಡಝನ್‌ಗೂ ಹೆಚ್ಚು ಬುಲೆಟ್‌ಗಳು ಹೊಡೆದಿವೆ, ಇದು ದಾಳಿಯಲ್ಲಿ ಹಲವಾರು ಭಯೋತ್ಪಾದಕರು ಭಾಗಿಯಾಗಿರಬಹುದು ಎಂದು ಸೂಚಿಸುತ್ತದೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ನಿಯೋಜಿಸಲಾದ ರಾಷ್ಟ್ರೀಯ ರೈಫಲ್ಸ್ ಘಟಕದ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಮಧ್ಯಾಹ್ನ 3 ಗಂಟೆಗೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಮತ್ತು ನಂತರ ಗ್ರೆನೇಡ್ ದಾಳಿಯಿಂದಾಗಿ ವಾಹನದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಸೇನೆ ತಿಳಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಅಥವಾ ಎನ್‌ಐಎ ಘಟನೆಯ ಕುರಿತ ತನಿಖೆಗೆ ಸೇರಿಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ, ಜಮ್ಮುವಿನಲ್ಲಿರುವ ಭಯೋತ್ಪಾದನಾ ನಿಗ್ರಹ ಘಟಕದ ತಂಡವು ದಾಳಿಯ ಸ್ಥಳಕ್ಕೆ ತೆರಳುತ್ತಿದೆ.
ಪೂಂಚ್‌ನ ಭಿಂಬರ್ ಗಲಿ ಪ್ರದೇಶದ ಬಳಿ ವಿಧಿವಿಜ್ಞಾನ ತಜ್ಞರ ತಂಡವೂ ಸ್ಥಳದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುತಾತ್ಮರಾದ ಐವರು ಸೈನಿಕರ ಪೈಕಿ ನಾಲ್ವರು ಪಂಜಾಬ್‌ನವರಾಗಿದ್ದರೆ, ಒಬ್ಬ ಯೋಧ ಒಡಿಶಾದವರಾಗಿದ್ದಾರೆ.







