ದ್ವಿತೀಯ ಪಿಯು ಫಲಿತಾಂಶ: ಮತ್ತೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಉಡುಪಿ ಜಿಲ್ಲೆ

ಉಡುಪಿ: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಸತತವಾಗಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದೆ. ಉಡುಪಿ ಜಿಲ್ಲೆ 95.24ಶೇ ತೇರ್ಗಡೆಯೊಂದಿಗೆ ದಕ್ಷಿಣ ಕನ್ನಡದ ನಂತರ ಎರಡನೇ ಸ್ಥಾನ ಪಡೆದಿದೆ. ದ.ಕ. 95.33ಶೇ. ತೇರ್ಗಡೆಯೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.
2019ರಲ್ಲಿ ರಾಜ್ಯದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದ ಉಡುಪಿ ಮರುವರ್ಷ ದ.ಕ.ದೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿತ್ತು. 2021ರಲ್ಲಿ ಕೋವಿಡ್ ಕಾರಣ ಪರೀಕ್ಷಾ ಫಲಿತಾಂಶ ಇದ್ದಿರಲಿಲ್ಲ. 2022ರಲ್ಲಿ ದ.ಕ. 88.02 ಶೇ. ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, ಉಡುಪಿ ಶೇ.86.38ನೊಂದಿಗೆ ಎರಡನೇ ಸ್ಥಾನ ಪಡೆದಿತ್ತು.
ಉಡುಪಿ ಜಿಲ್ಲೆಗೆ ಈ ಬಾರಿ ವಿಜ್ಞಾನ ವಿಭಾಗದಲ್ಲಿ ನಾಲ್ಕು ರ್ಯಾಂಕ್‌ಗಳು ಬಂದಿವೆ. ನಗರದ ಎಂಜಿಎಂ ಕಾಲೇಜಿನ ಸಾತ್ವಿಕ್ ಪದ್ಮನಾಭ ಭಟ್ ಹಾಗೂ ಪಿಪಿಸಿಯ ಜೆಸ್ವಿಟಾ ಡಯಾಸ್ 595 ಅಂಕಗಳೊಂದಿಗೆ ಎರಡನೇ ರ್ಯಾಂಕ್ ಹಂಚಿಕೊಂಡಿದ್ದಾರೆ.
ಕುಂದಾಪುರ ಶ್ರೀ ವೆಂಕಟರಮಣ ಪಿಯು ಕಾಲೇಜಿನ ನೇಹಾ ರಾವ್ ಹಾಗೂ ಕಾರ್ಕಳದ ಜ್ಙಾನಸುಧಾ ಪಿಯು ಕಾಲೇಜಿನ ಸಮ್ಯಾ ಸದಾನಂದ ಮಾಬೆನ್ ತಲಾ 594 ಅಂಕಗಳೊಂದಿಗೆ ಮೂರನೇ ರ್ಯಾಂಕ್ ಹಂಚಿಕೊಂಡಿದ್ದಾರೆ.