ಸಹಕಾರಿ ಸಂಘಗಳ ನಡುವೆ ಇರಬೇಕಾದ ಸಹಬಾಳ್ವೆ

►► ಸರಣಿ - 08
ಡೇರಿ ವಲಯದ ಸಹಕಾರಿ ಕ್ರಾಂತಿ ಇನ್ನಷ್ಟು ವಿಕೇಂದ್ರೀಕರಣವಾದಾಗ, ಹೆಚ್ಚೆಚ್ಚು ಜನರನ್ನು ಒಳಗೊಂಡು, ದೇಶದ ದೊಡ್ಡ ಸಂಖ್ಯೆಯ ಸಾಮಾನ್ಯ ಜನರೇ ಆ ಬೃಹತ್ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಭಾಗೀದಾರರಾಗಿರುತ್ತಾರೆ. ಗ್ರಾಹಕರಿಗೂ ಸ್ಥಳೀಯ, ಆರೋಗ್ಯಕರ ಉತ್ಪನ್ನಗಳು ನ್ಯಾಯಯುತ ಬೆಲೆಯಲ್ಲಿ ಲಭಿಸುವಂತಾಗುತ್ತದೆ. ಇನ್ನೂ ಮುಖ್ಯವಾಗಿ, ಈ ವಿಕೇಂದ್ರೀಕೃತ ಅಭಿವೃದ್ಧಿ ಕಾರ್ಪೊರೇಟ್ ವಲಯವನ್ನು ಸಾಕಷ್ಟು ದೂರ ಇಡಲಿದೆ.
ಇಂದು ದೇಶದ ಹಲವಾರು ಕಡೆಗಳಲ್ಲಿ ನೂರಾರು, ಸಾವಿರಾರು ಹಸುಗಳನ್ನು ಒಂದೆಡೆ ಕೂಡಿ, ಹಾಲು ಕರೆಯುವ ಕಾರ್ಪೊರೇಟ್ ಡೇರಿ ಫಾರ್ಮ್‌ಗಳು ತಲೆ ಎತ್ತುತ್ತಿವೆ. ಆದರೂ ನಮ್ಮ ದೇಶದಲ್ಲಿ ಇಂದಿಗೂ ಶೇ. ೪೫ರಷ್ಟು ಜನಸಂಖ್ಯೆ ಒಂದಲ್ಲ ಒಂದು ರೀತಿಯಲ್ಲಿ ಕೃಷಿ ಆರ್ಥಿಕತೆಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಳ್ಳುತ್ತಿದೆ. ಆ ಜನಸಂಖ್ಯೆಯ ಒಂದು ಗಣನೀಯ ಪಾಲು ಹೈನುಗಾರಿಕೆಯನ್ನು ಅವಲಂಬಿಸಿದೆ. ಇದರಿಂದಾಗಿ, ಭಾರತದಲ್ಲಿ ಕಾರ್ಪೊರೇಟ್ ವಲಯ ಜನರಿಂದ ಹೈನುಗಾರಿಕೆಯನ್ನು ಸಂಪೂರ್ಣ ಕಿತ್ತುಕೊಳ್ಳುವುದು ಸಾಧ್ಯವಿಲ್ಲ. ಮಾತ್ರವಲ್ಲ ಇನ್ನೆಷ್ಟೇ ಡೇರಿ ಫಾರ್ಮ್ ಗಳು ತಲೆಯೆತ್ತಿದರೂ, ಅಗಾಧ ಜನಸಂಖ್ಯೆಯಿರುವ ನಮ್ಮ ದೇಶದ ದಿನನಿತ್ಯದ ಹಾಲಿನ ಬೇಡಿಕೆಯನ್ನು ಪೂರೈಸಬೇಕಾದುದು ಹೈನುಗಾರಿಕೆ ನಡೆಸುವ ರೈತರೇ. ಬಳಸುವವನು ಈ ದೇಶದ ಪ್ರಜೆಯೇ. ಕಾರ್ಪೊರೇಟ್ ಸಂಸ್ಥೆಗಳು ಉತ್ಪಾದಕ ಮತ್ತು ಬಳಕೆದಾರರ ನಡುವೆ ಮಧ್ಯವರ್ತಿಗಳಾಗಿ ಪ್ರವೇಶಿಸಿ, ಆ ಇಬ್ಬರ ಮೇಲೆಯೂ ನಿಯಂತ್ರಣ ಸಾಧಿಸುತ್ತಾ ಲಾಭವನ್ನು ಬಾಚುವ ದಂಧೆಗೆ ಇಳಿಯಲು ಹವಣಿಸುತ್ತಿವೆ. ಈ ಎಚ್ಚರ ಉತ್ಪಾದಕ ಮತ್ತು ಬಳಕೆದಾರರಿಗೆ ಇರದ ಹೊರತು ಇಬ್ಬರೂ ಶೋಷಣೆಗೆ ಒಳಗಾಗುತ್ತಲೇ ಇರುತ್ತಾರೆ. ಉತ್ಪಾದಕ ಶೋಷಣೆ ಮುಕ್ತ ವಾತಾವರಣದಲ್ಲಿ ತನ್ನ ಸಂವಿಧಾನ ದತ್ತ ಬದುಕುವ ಹಕ್ಕನ್ನು ಉಳಿಸಿಕೊಳ್ಳುವುದಕ್ಕಾಗಿ ಸಂಘಟಿತವಾಗಬೇಕಾಗುತ್ತದೆ. ಅಂತಹ ಸಂಘಟನೆಯ ಅತ್ಯುತ್ತಮ ಮಾದರಿ ಸಹಬಾಳ್ವೆ ಮತ್ತು ಸಹಕಾರ ಎನಿಸಿದೆ. ಹಾಗಾಗಿ, ದೇಶದ ಜನರ ನೆಲ, ಜಲ, ಇತರ ಸಂಪನ್ಮೂಲಗಳು ಜನರ ಕೈಯಲ್ಲೇ ಉಳಿಯಬೇಕೆಂದರೆ ಅವೆಲ್ಲದರ ನಿರ್ವಹಣೆ ಸಹಕಾರಿ ತತ್ವದಲ್ಲಿ ಇರಬೇಕೆನ್ನುವುದು ನಮ್ಮ ಆಶಯವಾಗಬೇಕು. ಈ ಕಾರಣಕ್ಕಾಗಿ ನಾವು ಡೇರಿ ಕ್ಷೇತ್ರವನ್ನು ಸಹಕಾರಿ ಆರ್ಥಿಕ ಮಾದರಿಯಲ್ಲೇ ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎಂದಿಗಿಂತ ಹೆಚ್ಚಾಗಿ ಇಂದು ನಮ್ಮನ್ನು ಎದುರಾಗಿದೆ.
ಅಮುಲ್ ಆಗಲಿ, ನಂದಿನಿ ಆಗಲಿ, ಹಾಲು ಒಕ್ಕೂಟಗಳು ಬೆಳೆದಂತೆಲ್ಲಾ ಪ್ರಮುಖವಾಗಿ ಮೂರು ಅಂಶಗಳು ಇಂದು ಅವನ್ನು ಸಹಕಾರಿ ತತ್ವದಿಂದ ವಿಮುಖಗೊಳಿಸುತ್ತಿವೆ. ಒಂದು ಸಹಕಾರಿ ಸಂಸ್ಥೆ ಯಶಸ್ವಿಯಾಗಿ ಬೆಳೆದಂತೆ ಅದರ ಸದಸ್ಯತ್ವವೂ ಬೆಳೆಯುವುದರಿಂದ ಅದೊಂದು ದೊಡ್ಡ ಜನಸಮೂಹ ಕೇಂದ್ರವಾಗುವುದರಿಂದ ಅದೇ ಒಂದು ಶಕ್ತಿ ಕೇಂದ್ರವಾಗಿ ರಾಜಕಾರಣವನ್ನು ಆಕರ್ಷಿಸತೊಡಗುತ್ತದೆ. ನಂದಿನಿ ಜಿಲ್ಲಾ ಒಕ್ಕೂಟಗಳ ಮತ್ತು ಮಹಾಮಂಡಳಿಯ ಚುನಾವಣೆಗಳು ಎಷ್ಟು ಪೈಪೋಟಿಯಿಂದ ಕೂಡಿರುತ್ತವೆ, ರಾಜ್ಯ ರಾಜಕಾರಣವನ್ನೂ ಹೇಗೆ ಪ್ರಭಾವಿಸುತ್ತವೆ ಎನ್ನುವುದನ್ನು ನಾವು ನೋಡಿದ್ದೇವೆ. ಎರಡನೆಯದಾಗಿ, ಒಂದು ಯಶಸ್ವಿ ಸಹಕಾರಿ ಸಂಸ್ಥೆ ಆರ್ಥಿಕವಾಗಿ ಸದೃಢವಾದಾಗ, ಅಲ್ಲಿ ಹಲವು ರೀತಿಯ ಭ್ರಷ್ಟತೆ, ಆರ್ಥಿಕ ಅಪನಿರ್ವಹಣೆಗಳು ನಡೆಯುತ್ತವೆ.
ಮೂರನೆಯದು, ಒಂದು ಸಂಸ್ಥೆಯ ಯಶಸ್ಸಿನ ಗುಟ್ಟು ಇರುವುದು ಅದರ ಉತ್ಪನ್ನ ವೈವಿಧ್ಯ, ಮಾರ್ಕೆಟಿಂಗ್, ವ್ಯಾಪಾರ ವಿಸ್ತರಣೆ ಮತ್ತು ಆ ಕ್ಷೇತ್ರದಲ್ಲಿ ಟಾಪ್ ಎಂದೆನಿಸಿಕೊಳ್ಳುವುದರಲ್ಲಿ. ಈ ಯಶಸ್ಸನ್ನು ಕಾಪಾಡಿಕೊಳ್ಳಲು ಸಂಸ್ಥೆ ಪ್ರತಿದಿನವೂ ಸ್ಪರ್ಧಾ ನೈಪುಣ್ಯವನ್ನು ತೋರಿಸುತ್ತಲೇ ಹೋಗಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವ ಸಲುವಾಗಿ ಒಂದು ಸಂಸ್ಥೆ ಸಹಕಾರಿಯೇ ಆಗಿದ್ದರೂ, ತನ್ನ ವ್ಯಾಪಾರ ವಿಸ್ತರಣೆಗಾಗಿ ಹಲವಾರು ಬಾರಿ ತನ್ನ ಸಹಕಾರಿ ತತ್ವವನ್ನು ಬದಿಗಿಟ್ಟು ಶುದ್ಧ ವ್ಯಾಪಾರಿ ತತ್ವವನ್ನು ಅನುಸರಿಸಬೇಕಾಗುತ್ತದೆ. ನಿರೀಕ್ಷೆಗೂ ಮೀರಿ ಬೆಳೆದು ನಿಂತಿರುವ ಅಮುಲ್ ಮತ್ತು ನಂದಿನಿ ಇಂದು ಇದೇ ಬಂಡವಾಳಶಾಹಿ ಸ್ಪರ್ಧಾ ವ್ಯಾಪಾರಿ ತತ್ವದಲ್ಲಿ ಒಂದಕ್ಕೊಂದು ತಳಕು ಹಾಕಿಕೊಂಡಿವೆ. ೨೦೨೨-೨೩ರಲ್ಲಿ ೫೫,೦೦೦ ಕೋಟಿ ರೂ. ವಾರ್ಷಿಕ ವಹಿವಾಟು ಅಂದಾಜಿಸಿರುವ ಅಮುಲ್ ಈ ಮೊದಲು ಯಾವ ಯಾವ ರಾಜ್ಯಗಳನ್ನು ಪ್ರವೇಶಿಸಿದೆಯೋ ಅಲ್ಲೆಲ್ಲ ತನ್ನ ಬೃಹತ್ ನೆಟ್ ವರ್ಕ್, ಬಂಡವಾಳ ಗಾತ್ರ ಮತ್ತು ಅಗಾಧ ಅನುಭವದಿಂದಲೇ ಆಯಾ ರಾಜ್ಯಗಳ ಸ್ಥಳೀಯ ಹಾಲು ಒಕ್ಕೂಟಗಳನ್ನು ಸೊರಗಿಸಿದೆ. ಸ್ಥಳೀಯವಾಗಿ ಸಹಕಾರ ತತ್ವದಲ್ಲಿ ಬೆಳೆಯಬೇಕಾದ ಅಲ್ಲಿಯ ಸಂಸ್ಥೆಗಳ ಅವಕಾಶಗಳನ್ನು ಕಿತ್ತುಕೊಂಡು ಬಹುತೇಕ ಏಕಸ್ವಾಮ್ಯ ಸಾಧಿಸಿದೆ. ದೇಶದಲ್ಲಿರುವ ಹಲವಾರು ಖಾಸಗಿ ಡೇರಿ ಸಂಸ್ಥೆಗಳೂ ಕೂಡ ಅಮುಲ್ ಮುಂದೆ ಸ್ಪರ್ಧಿಸಲಾಗುತ್ತಿಲ್ಲ, ಸಣ್ಣ ಗಾತ್ರದಲ್ಲಿಯೇ ಉಳಿದಿವೆ ಎನ್ನುವುದನ್ನು ಗಮನಿಸಿ. ಹಾಗಿದ್ದೂ ತಾನು ನಂಬರ್ ಒನ್ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಅದು ಮತ್ತಷ್ಟು ವಿಸ್ತರಣೆ ಮಾಡಬೇಕಾಗಿ ಬಂದಿದ್ದು, ಹೊಸ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಾ ಅವನ್ನು ಆಕ್ರಮಿಸಲು ಪ್ರಯತ್ನಿಸುತ್ತಿದೆ. ವಾರ್ಷಿಕ ಸುಮಾರು ೫,೦೦೦ ಕೋಟಿ ರೂ. ವಹಿವಾಟು ಇರುವ ನಂದಿನಿಯನ್ನು ಅದು ನುಂಗಲು ಹೊರಟಿರುವ ಕಾರಣವೇನೆಂದರೆ ನಂದಿನಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ, ನಂದಿನಿ ಕೂಡ ಅಮುಲ್‌ನಂತೆಯೇ ಬಂಡವಾಳಶಾಹಿ ವ್ಯಾಪಾರಿ ಶಿಸ್ತನ್ನು ಅಳವಡಿಸಿಕೊಂಡಿದ್ದು, ಅಮುಲ್‌ಗೆ ಹಲವು ಕಡೆಗಳಲ್ಲಿ ನೇರ ಪ್ರತಿಸ್ಪರ್ಧಿ ಎನಿಸಿದೆ. ಇತರ ರಾಜ್ಯಗಳಲ್ಲಿ ವಹಿವಾಟು ವಿಸ್ತರಿಸುತ್ತಿದೆ. ಅಮುಲ್‌ನಂತೆ ನಂದಿನಿಯೂ ೧೯೮೯ರಲ್ಲೇ ಕೋಲ್ಕತಾ ನಗರಕ್ಕೆ ಹವಾನಿಯಂತ್ರಿತ ಟ್ಯಾಂಕರುಗಳ ಮೂಲಕ ವಿಶೇಷ ರೈಲಿನಲ್ಲಿ ಹಾಲನ್ನು ಕಳಿಸಿತ್ತು. ಮೊನ್ನೆಯಷ್ಟೇ ಕೇರಳದ ಮಿಲ್ಮಾ ಸಹಕಾರಿ ಒಕ್ಕೂಟ ನಂದಿನಿ ಅಲ್ಲಿ ವ್ಯಾಪಾರ ವಿಸ್ತರಣೆ ಮಾಡುವುದನ್ನು ವಿರೋಧಿಸಿತು.
ಸಹಕಾರಿ ಸಂಸ್ಥೆಗಳು ಬೃಹತ್ ಆಗಿ ಬೆಳೆಯುವುದು ಆ ಸಂಸ್ಥೆಗಳ ದೃಷ್ಟಿಯಲ್ಲಿ ಸ್ವಾಗತಾರ್ಹ ಎನಿಸಿದರೂ, ಅವು ಬೃಹತ್ತಾಗಿ ಬೆಳೆದಂತೆಲ್ಲಾ ಸಹಕಾರಿ ತತ್ವದಿಂದ ವಿಮುಖವಾಗಿ, ಬಂಡವಾಳಶಾಹಿ ತತ್ವಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯಕ್ಕೆ ಸಿಲುಕುತ್ತವೆ. ಇದರಿಂದ ಆ ಸಹಕಾರಿ ಸಂಸ್ಥೆಗಳ ಸದಸ್ಯರು ಲಾಭ ಪಡೆಯುವುದು ಹೌದಾದರೂ, ಅದೇ ಸಮಯಕ್ಕೆ ಅದೇ ಕ್ಷೇತ್ರದ ಇತರ ಸಹಕಾರಿ ಸಂಸ್ಥೆಗಳಿಗೆ ಮತ್ತು ಅವುಗಳ ಸದಸ್ಯರಿಗೆ ಮಾರಕವಾಗುತ್ತವೆ ಎನ್ನುವುದೂ ನಿಜವೇ. ಸಹಕಾರಿ ಆರ್ಥಿಕತೆಯ ವಿಕೇಂದ್ರೀಕರಣ ಮೊಟಕಾಗಿ, ದೇಶದ ಎಲ್ಲ ಜನರನ್ನೂ ಒಳಗೊಳ್ಳುವ ಅವಕಾಶಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೇನು?
ಸಹಕಾರಿ ಕ್ಷೇತ್ರವು ಹೆಚ್ಚೆಚ್ಚು ವಿಕೇಂದ್ರೀಕರಣಗೊಂಡು, ಹೆಚ್ಚೆಚ್ಚು ಲೋಕಲ್ ಆಗುವುದೇ ಇದಕ್ಕೆ ಸೂಕ್ತ ಪರಿಹಾರ. ಸಹಕಾರಿ ಮನೋಭಾವ ಮತ್ತು ಅದರ ಲಾಭ ದೇಶದೆಲ್ಲೆಡೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರಾತ್ಮಕವಾಗಿ, ಆರೋಗ್ಯಕರವಾಗಿ ಪಸರಿಸಬೇಕೆಂದರೆ ಕೆಲವೊಂದು ಸುಧಾರಣೆಗಳನ್ನು ತರಬೇಕಾಗುತ್ತದೆ. ದೇಶದಲ್ಲಿ ಅತ್ಯಂತ ಯಶಸ್ವಿಯಾಗಿರುವ ಡೇರಿ ಕ್ಷೇತ್ರದ ವಿಕೇಂದ್ರೀಕರಣಕ್ಕೆ ಕೆಲವು ಸಲಹೆಗಳು:
೧. ಅಮುಲ್ ಮತ್ತು ನಂದಿನಿ ಎರಡೂ ಮಹಾಮಂಡಳಿಗಳನ್ನು ಹಲವು ಸ್ವತಂತ್ರ ಮಂಡಳಿಗಳನ್ನಾಗಿ ವಿಂಗಡಿಸಬೇಕು. ಉದಾಹರಣೆಗೆ, ನಂದಿನಿಯನ್ನು ಕರ್ನಾಟಕದ ಒಂದೊಂದು ಆಡಳಿತ ವಿಭಾಗಕ್ಕೆ ಒಂದರಂತೆ ಐದು ಮಂಡಳಿಗಳನ್ನಾಗಿ ಪುನರ್ವಿಂಗಡಿಸಬಹುದು. ಪ್ರತೀ ಮಂಡಳಿಯೂ ಆ ವಿಭಾಗದ ಜಿಲ್ಲೆಗಳ ಹಾಲು ಒಕ್ಕೂಟಗಳಿಂದ ರಚನೆಯಾಗಿರಬೇಕು. ಪ್ರತೀ ಜಿಲ್ಲಾ ಒಕ್ಕೂಟವೂ ತನ್ನ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸಬೇಕು.
೨. ಪ್ರತೀ ರಾಜ್ಯದಲ್ಲೂ ಸ್ಥಳೀಯ ಸಹಕಾರಿ ಹಾಲು ಮಂಡಳಿಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಉತ್ತೇಜನವಿರಬೇಕು. ರಾಜ್ಯದ ಎಲ್ಲ ಮಂಡಳಿಗಳಿಂದ ರಚಿತವಾದ ಒಂದು ಮಹಾಮಂಡಳಿಯೂ ಇರಬೇಕು. ರಾಜ್ಯದ ಮಂಡಳಿಗಳ ವ್ಯವಹಾರಗಳನ್ನು ಸಮನ್ವಯಿಸುವ ಹಾಗೂ ಅಂತರ್‌ರಾಜ್ಯ ಮಹಾಮಂಡಳಿಗಳೊಂದಿಗೆ ವ್ಯವಹರಿಸುವ ಕಾರ್ಯವ್ಯಾಪ್ತಿಯಷ್ಟೇ ಮಹಾಮಂಡಳಿಗೆ ಇರಬೇಕು. ಈಗಿರುವ ಮಹಾಮಂಡಳಿಯ ಕಾರ್ಯವ್ಯಾಪ್ತಿಯನ್ನು ಮಹಾಮಂಡಳಿ ಮತ್ತು ಮಂಡಳಿಯ ನಡುವೆ ಹಂಚಬೇಕು. ಇದರಿಂದ ಮಹಾಮಂಡಳಿಯಲ್ಲಿ ಸಾಂದ್ರವಾಗಿರುವ ಅವಕಾಶಗಳು ವಿಕೇಂದ್ರೀಕರಣಗೊಳ್ಳಲು ಅನುಕೂಲವಾಗುತ್ತದೆ. ಅಧಿಕಾರಸ್ವಾಮ್ಯವೂ ಹಂಚಲ್ಪಡುತ್ತದೆ.
ಈ ಎಲ್ಲ ಮಹಾಮಂಡಳಿಗಳನ್ನು ಸಮನ್ವಯಿಸುವ ಮತ್ತು ಅವುಗಳ ನಡುವೆ ರಾಷ್ಟ್ರೀಯ ಜಾಲವನ್ನು ಕಲ್ಪಿಸುವ ಒಂದು ರಾಷ್ಟ್ರೀಯ ಮಂಡಳಿ ಇರಬೇಕು. ಈ ಸಂಸ್ಥೆ ಅಂತರ್‌ರಾಷ್ಟ್ರೀಯ ವಹಿವಾಟನ್ನೂ ವಹಿಸಿಕೊಳ್ಳಬೇಕು. ಈ ಎಲ್ಲವೂ ಸಹಕಾರಿ ತತ್ವದಲ್ಲಿಯೇ ರಚನೆಯಾಗಿ, ಸರಕಾರದ ಹಸ್ತಕ್ಷೇಪ ಅತ್ಯಂತ ಕನಿಷ್ಠ ಮಟ್ಟದಲ್ಲಿರಬೇಕು.
೩. ದೇಶದ ಯಾವುದೇ ಒಕ್ಕೂಟ ಮತ್ತೊಂದು ಒಕ್ಕೂಟದ, ಯಾವುದೇ ಮಂಡಳಿ ಮತ್ತೊಂದು ಮಂಡಳಿಯ ವ್ಯಾವಹಾರಿಕ ಗಡಿಯನ್ನು ಅತಿಕ್ರಮಿಸಬಾರದು. ಆದರೆ, ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಮತ್ತು ಲಭ್ಯತೆಯ ಕೊರತೆ ಇರುವ ಪ್ರದೇಶಗಳಲ್ಲಿ ಅವುಗಳ ಸುತ್ತಲ ಮಂಡಳಿಗಳು ಸಹಕಾರಿ ಮನೋಭಾವದಲ್ಲಿ ಆ ಮಂಡಳಿಗೆ ದಾಸ್ತಾನು ಪೂರೈಸಬಹುದು.
೪. ಯಾವುದೇ ಡೇರಿ ಉತ್ಪನ್ನವನ್ನು ತನ್ನ ಮಂಡಳಿಯ ವ್ಯಾಪ್ತಿಯ ಹೊರಗೆ ಮಾರಾಟ ಮಾಡಬೇಕೆಂದರೆ, ಅದನ್ನು ಸಂಬಂಧಿಸಿದ ಹೊರಗಿನ ಮಂಡಳಿಯ ಮೂಲಕವೇ ಮಾಡಬೇಕು. ಒಂದು ಮಂಡಳಿಯಲ್ಲಿ ಅದೇ ಉತ್ಪನ್ನವು ಲಭ್ಯವಿದ್ದಾಗ, ಇನ್ನೊಂದು ಮಂಡಳಿಯ ಉತ್ಪನ್ನವನ್ನು ತನ್ನ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಆಯ್ಕೆ ಪ್ರಸ್ತುತ ಮಂಡಳಿಗೆ ಇರಬೇಕು. ಇಲ್ಲಿ ಗ್ರಾಹಕರ ಆಯ್ಕೆಯ ಹಕ್ಕಿನ ಪ್ರಶ್ನೆ ಬರಬಹುದು. ಒಂದು ನಿದರ್ಶನವೆಂದರೆ, ಒಂದು ದಶಕದ ಹಿಂದೆ ಕ್ಯೂಬಾದಲ್ಲಿ ಎಲ್ಲಿ ಹೋದರೂ (ಉದಾಹರಣೆಗೆ) ಒಂದು ಟೂತ್ ಪೇಸ್ಟ್ ಅನ್ನು ಟೂತ್ ಪೇಸ್ಟ್ ಎಂದೇ ಮಾರುತ್ತಿದ್ದರೇ ಹೊರತು, ಅದಕ್ಕೆ ಯಾವುದೇ ಬ್ರ್ಯಾಂಡ್ ನೇಮ್ ಇರುತ್ತಿರಲಿಲ್ಲ. ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ಯೂಬಾ ಇತರ ಹಲವಾರು ದೇಶಗಳಿಗಿಂತ ಮುಂದಿತ್ತು. ಗ್ರಾಹಕರ ಹಕ್ಕು ಎನ್ನುವುದೂ ಸಾಕ್ಷೇಪ. ಒಬ್ಬ ಗ್ರಾಹಕನಿಗೆ ಒಂದು ಬ್ರ್ಯಾಂಡ್ ಒಂದು ಪ್ರದೇಶದಲ್ಲಿ ಲಭಿಸದೆ ಇರುವುದು ಅಲ್ಲಿಯ ಸಾವಿರ ಉತ್ಪಾದಕರ ದೃಷ್ಟಿಯಿಂದ ಒಳಿತು ಎನ್ನುವುದಾದರೆ, ಆ ಗ್ರಾಹಕ ಆ ಅಲಭ್ಯತೆಯನ್ನು ಒಪ್ಪಿಕೊಂಡು ಪರ್ಯಾಯ ಬ್ರ್ಯಾಂಡನ್ನು ಬಳಸಬೇಕಾಗುತ್ತದೆ. ಅದು ಸಮಾಜವಾದ. ಅಲ್ಲದೇ, ಇಂದಿನ ಈ-ಕಾಮರ್ಸ್ ಯುಗದಲ್ಲಿ ಗ್ರಾಹಕ ತನ್ನ ಇಚ್ಚೆಯ ಬ್ರಾಂಡನ್ನು ತರಿಸಿಕೊಳ್ಳುವ ಸೌಲಭ್ಯ ಇದ್ದೇ ಇದೆ.
೫. ಹೈನು ಮತ್ತು ಮೇವು ಅಭಿವೃದ್ಧಿ, ಪಶು ಆರೋಗ್ಯ ಸೇವೆಗಳು, ಹಾಲು ಉತ್ಪಾದಕರ ಸಾಮರ್ಥ್ಯ ವೃದ್ಧಿಯ ತರಬೇತಿಗಳು, ಇನ್ನಿತರ ಕಾರ್ಯಕ್ರಮಗಳು ಆಯಾ ಮಂಡಳಿಗಳು ಅಥವಾ ಜಿಲ್ಲಾ ಒಕ್ಕೂಟ ಗಳಿಂದಲೇ ನಡೆದು, ಅಲ್ಲಿಯ ಸ್ಥಳೀಯತೆಗೆ ಸೂಕ್ತವಾಗಿರುವಂತೆ ಒತ್ತು ಕೊಡಬೇಕು. ಈಗ ಅವು ಕೇಂದ್ರ ಮಹಾಮಂಡಳಿಯಿಂದ ನಿರ್ದೇಶಿತವಾಗಿವೆ.
ಈ ಕೆಲವು ಸಲಹೆಗಳು ಪೂರ್ಣವೂ ಅಲ್ಲ, ಅಂತಿಮವೂ ಅಲ್ಲ. ವಿಕೇಂದ್ರೀಕರಣದ ದೃಷ್ಟಿಯಿಂದ ಇವುಗಳ ಚರ್ಚೆಯಾಗಬೇಕು. ಡೇರಿ ವಲಯದ ಸಹಕಾರಿ ಕ್ರಾಂತಿ ಇನ್ನಷ್ಟು ವಿಕೇಂದ್ರೀಕರಣವಾದಾಗ, ಹೆಚ್ಚೆಚ್ಚು ಜನರನ್ನು ಒಳಗೊಂಡು, ದೇಶದ ದೊಡ್ಡ ಸಂಖ್ಯೆಯ ಸಾಮಾನ್ಯ ಜನರೇ ಆ ಬೃಹತ್ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಭಾಗೀದಾರರಾಗಿರುತ್ತಾರೆ. ಗ್ರಾಹಕರಿಗೂ ಸ್ಥಳೀಯ, ಆರೋಗ್ಯಕರ ಉತ್ಪನ್ನಗಳು ನ್ಯಾಯಯುತ ಬೆಲೆಯಲ್ಲಿ ಲಭಿಸುವಂತಾಗುತ್ತದೆ. ಇನ್ನೂ ಮುಖ್ಯವಾಗಿ, ಈ ವಿಕೇಂದ್ರೀಕೃತ ಅಭಿವೃದ್ಧಿ ಕಾರ್ಪೊರೇಟ್ ವಲಯವನ್ನು ಸಾಕಷ್ಟು ದೂರ ಇಡಲಿದೆ. ಈಗಾಗಲೇ ಡೇರಿ ವಲಯದ ಕಾರ್ಬನ್ ಹೆಜ್ಜೆಗುರುತು ಹೆಚ್ಚಾಗುತ್ತಿದೆ ಎನ್ನುವ ಕಳಂಕವೂ ಅದಕ್ಕಿದೆ. ಅದನ್ನು ಕಡಿಮೆ ಮಾಡುವಲ್ಲಿ, ಕ್ರಮೇಣ ಶೂನ್ಯವಾಗಿಸುವಲ್ಲಿ ವಿಕೇಂದ್ರೀಕರಣ ಮತ್ತು ಸ್ಥಳೀಯ ವಹಿವಾಟು ಅತಿಮುಖ್ಯ ಹೆಜ್ಜೆಯಾಗಬೇಕು.
ಆದರೆ ದೇಶದ ಪ್ರಗತಿ ಖಾಸಗೀಕರಣದಿಂದ ಮತ್ತು ಕಾರ್ಪೊರೇಟೀಕರಣದಿಂದ ಎನ್ನುವ ನೀತಿ ನಮ್ಮ ಪ್ರಭುತ್ವಗಳಿಗೆ ಇರುವಾಗ ಈ ಬಗೆಯ ವಿಕೇಂದ್ರೀಕರಣಕ್ಕೆ ಅವಕಾಶ ಇರುವುದೇ? ಸಾಧ್ಯವಾಗುವುದು ಜನತೆ ಆ ನಿಟ್ಟಿನಲ್ಲಿ ಗಟ್ಟಿಯಾಗಿ ನಡೆದಾಗ. ನಡೆಯುವೆವೇ?







